ಪಾಟ್ನಾ: ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆ. ಕೋಪಗೊಂಡ ಗ್ರಾಮಸ್ಥರು ಆರೋಪಿತನಾದ ಶಾಲೆಯ ಮುಖ್ಯೋಪಾಧ್ಯಾಯನನ್ನು ಥಳಿಸಿದ್ದಾರೆ.
ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕತಿಹಾರ್ ಜಿಲ್ಲೆಯ ಸೇಮಾಪುರ ಪ್ರದೇಶದ ಪಿಪ್ರಿ ಬಹಿಯಾರ್ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಮುಖ್ಯೋಪಾಧ್ಯಾಯ 12 ವರ್ಷದ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆಯ ಕೆನ್ನೆಗೆ ಕಚ್ಚಿದ್ದಾನೆ ಎಂದು ಹೇಳಲಾಗಿದೆ.
ಹುಡುಗಿ ಕೂಗುವುದನ್ನು ಕೇಳಿದ ಕೆಲವರು ಕೋಣೆಗೆ ಧಾವಿಸಿದ್ದಾರೆ. ಘಟನೆಯ ನಂತರ ಆರೋಪಿಯನ್ನು ಶಾಲಾ ಕೊಠಡಿಯಲ್ಲಿ ಬಂಧಿಸಿಡಲಾಗಿದೆ. ವಿಷಯ ತಿಳಿದು ಬಾಲಕಿಯ ಕುಟುಂಬ ಮತ್ತು ಇತರ ಸ್ಥಳೀಯರು ಶಾಲೆಯ ಹೊರಗೆ ಗುಂಪುಗೂಡಿದ್ದಾರೆ. ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದ್ದಾರೆ. ಪೊಲೀಸರು ಮುಖ್ಯೋಪಾಧ್ಯಾಯನನ್ನು ಹೊರಗೆ ಕರೆದೊಯ್ಯುತ್ತಿದ್ದಾಗ, ಕೋಪಗೊಂಡ ಗ್ರಾಮಸ್ಥರು ಆರೋಪಿಯ ಮೇಲೆ ಹಲ್ಲೆ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪೊಲೀಸರು ಗುಂಪು ಚದುರಿಸಿ ಆರೋಪಿಯನ್ನು ರಕ್ಷಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಇಂತಹ ಕೃತ್ಯವೆಸಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಶಾಲೆಯಲ್ಲಿ ಬಾಲಕಿಗೆ ಕಿರುಕುಳ ನೀಡುವುದು ಇದೇ ಮೊದಲಲ್ಲ. ಈ ಬಾರಿ ಘಟನೆ ಬೆಳಕಿಗೆ ಬಂದಾಗ ಗ್ರಾಮಸ್ಥರು ತುಂಬಾ ಕೋಪಗೊಂಡು ಆತನನ್ನು ಥಳಿಸಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.