ಪರವಾನಗಿ ಮತ್ತು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿಯು ಬಿಹಾರದ ಚೆಕ್‌ಪೋಸ್ಟ್ ನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಜೆಹನಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
20 ವರ್ಷದ ಕಾಲೇಜು ವಿದ್ಯಾರ್ಥಿ ಸುಧೀರ್ ಕುಮಾರ್ ಯಾದವ್ ಮೇಲೆ ಗುಂಡು ಹಾರಿಸಿದ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮೊಹಮ್ಮದ್ ಮುಮ್ತಾಜ್ ಖಾನ್ ನನ್ನು ಬಂಧಿಸಲಾಗಿದೆ. ನಳಂದ ಜಿಲ್ಲೆಯವರಾದ ಸುಧೀರ್ ಕುಮಾರ್ ಯಾದವ್ ಬೆನ್ನಿಗೆ ಗುಂಡು ತಗುಲಿದ್ದು ಗಾಯಗೊಂಡ ನಂತರ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ವೇಳೆ ಆತ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಚೆಕ್ ಪೋಸ್ಟ್ ನಲ್ಲಿರುವ ಎಸ್‌ಎಚ್‌ಒ ನನ್ನನ್ನು ತಡೆಯಲು ಪ್ರಯತ್ನಿಸಿದಾಗ ನಾನು ವೇಗವಾಗಿ ಹೋದೆ. ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸುಮಾರು 4 ಕಿಲೋಮೀಟರ್ ವರೆಗೆ ಬೆನ್ನಟ್ಟಿದರು ಮತ್ತು ನಂತರ ನನ್ನ ಮೇಲೆ ಗುಂಡು ಹಾರಿಸಿದರು ಎಂದು ಸುಧೀರ್ ಕುಮಾರ್ ಯಾದವ್ ಹೇಳಿದ್ದಾರೆ.
ಮೊಹಮ್ಮದ್ ಮುಮ್ತಾಜ್ ಖಾನ್ ಅವರ ಸೇವಾ ಆಯುಧವನ್ನು ಬ್ಯಾಲಿಸ್ಟಿಕ್ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜೆಹಾನಾಬಾದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪಿ ದೀಪಕ್ ರಂಜನ್ ಹೇಳಿದ್ದಾರೆ.
ಎಎಸ್‌ಐ ಅಲ್ಲದೆ, ಓಕ್ರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (ಎಸ್‌ಎಚ್‌ಒ) ಚಂದ್ರಹಾಸ್ ಕುಮಾರ್ ಮತ್ತು ವಾಹನ ತಪಾಸಣೆ ನಡೆಸುತ್ತಿದ್ದ ಐವರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ.
ಆದರೆ ತನ್ನ ಮಗನಿಗೆ ಗುಂಡು ಹಾರಿಸಿದ ಪೊಲೀಸ್ ಅಧಿಕಾರಿ ಪಾನಮತ್ತನಾಗಿದ್ದ ಎಂದು ಸಂತ್ರಸ್ತೆಯ ತಂದೆ ರವೀಂದ್ರ ಯಾದವ್ ಆರೋಪಿಸಿದ್ದಾರೆ. ಪೊಲೀಸರು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ನನ್ನ ಮಗ ಹೆದರಿದ್ದಾನೆ ಎಂದು ವಿದ್ಯಾರ್ಥಿ ಪೋಷಕರು ತಿಳಿಸಿದ್ದಾರೆ