ಬಿಹಾರದ ಸರನ್ ಜಿಲ್ಲೆಯ ಛಾಪ್ರಾದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಿಂದಾಗಿ ಮನೆ ಕುಸಿದು ಆರು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಸ್ಫೋಟದ ಹಿಂದಿನ ಕಾರಣವನ್ನು ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನು ಸಹ ಕರೆಯಲಾಗಿದೆ ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಛಪ್ರಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ತೀವ್ರವಾಗಿತ್ತು ಎಂದರೆ ಮನೆ ಸಂಪೂರ್ಣವಾಗಿ ನಾಶವಾಯಿತು ಮತ್ತು ಆರಕ್ಕೂ ಹೆಚ್ಚು ಪಕ್ಕದ ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಒಂದು ಗಂಟೆ ಕಾಲ ನಿರಂತರವಾಗಿ ಸ್ಫೋಟದ ಸದ್ದು ಕೇಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.