ಪಾಟ್ನಾ: ಬಿಹಾರದ ಜೆಹಾನಾಬಾದ್‌ನಲ್ಲಿರುವ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನಡೆದ ದುರಂತ ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.
ಮಖ್ದುಂಪುರ ಬ್ಲಾಕ್‌ನ ವನವರ್ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಮಖ್ದುಂಪುರ್ ಮತ್ತು ಜೆಹಾನಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ. ಪವಿತ್ರ ಶ್ರಾವಣ ಮಾಸದ ಸೋಮವಾರದಂದು ದೇವಾಲಯದ ಒಳಗೆ ಜನದಟ್ಟಣೆ ಹೆಚ್ಚಾಗಿ ಈ ಘಟನೆ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜುಲೈ 2 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 120 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಭಾರತದಲ್ಲಿ ದೇವಾಲಯಗಳು ಮತ್ತು ಧಾರ್ಮಿಕ ಕೂಟಗಳಲ್ಲಿ ಕಾಲ್ತುಳಿತಗಳು ವರ್ಷಗಳಿಂದ ಅನೇಕ ಜೀವಗಳನ್ನು ಬಲಿ ಪಡೆದಿವೆ. ಪ್ರಮುಖವಾಗಿ 2005 ರಲ್ಲಿ ಮಹಾರಾಷ್ಟ್ರದ ಮಂದಾರದೇವಿ ದೇವಸ್ಥಾನದಲ್ಲಿ ಕಾಲ್ತುಳಿತದಲ್ಲಿ 340 ಕ್ಕೂ ಹೆಚ್ಚು ಭಕ್ತರ ಸಾವನ್ನಪ್ಪಿದ್ದರು. 2008 ರ ರಾಜಸ್ಥಾನದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಕನಿಷ್ಠ 250 ಜನರು ಸಾವನ್ನಪ್ಪಿದರು. 2008 ರಲ್ಲಿ ಹಿಮಾಚಲ ಪ್ರದೇಶದ ನೈನಾ ದೇವಿ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮತ್ತೊಂದು ಕಾಲ್ತುಳಿತವು 162 ಜನರ ಪ್ರಾಣಹಾನಿಗೆ ಕಾರಣವಾಯಿತು.