ಪಾಟ್ನಾ: ಬಿಹಾರದ ಸಮಷ್ಠಿಪುರ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಕರ್ಮಿಗಳು ಬೆತ್ತಲೆಗೊಳಿಸಿ ಮೃತಪಟ್ಟಿದ್ದಾಳೆ ಎಂದು ಭಾವಿಸಿ ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದಾರೆ.
ಸಮಷ್ಠಿಪುರ ಜಿಲ್ಲೆ ವಿಭೂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ, ಗ್ರಾಮದಲ್ಲಿ ಘಟನೆ ನಡೆದಿದೆ ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ದಲ್ ಸಿಂಗ್ ಸರಾಯ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಶಿಫಾರಸು ಮಾಡಿದ ನಂತರ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾಳೆ.
ಗ್ರಾಮದಲ್ಲಿ ಆಯೋಜನೆಯಾಗಿದ್ದ ಮದುವೆ ಸಮಾರಂಭಕ್ಕಾಗಿ ಟೆಂಟ್, ಬಾಜಾ ಕಾರ್ಮಿಕರು ಸೇರಿದಂತೆ ಹಲವರು ಆಗಮಿಸಿದ್ದಾರೆ. ಅವರೊಂದಿಗೆ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರು ಕೂಡ ಬಂದಿದ್ದಾರೆ. ಬೆಳಿಗ್ಗೆ ಮನೆಯಿಂದ ಶೌಚಕ್ಕಾಗಿ ಹೊರಗೆ ಹೋಗಿದ್ದ ಮಹಿಳೆಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಸುತ್ತುವರೆದು ಚಿನ್ನಾಭರಣ ಕೊಡುವಂತೆ ಹಲ್ಲೆ ಮಾಡಿದ್ದಾರೆ. ಬಲವಂತವಾಗಿ ಬಟ್ಟೆ ತೆಗೆದು ಅತ್ಯಾಚಾರವೆಸಗಿದ್ದಾರೆ. ಆಕೆಯನ್ನು ಥಳಿಸಲಾಗಿದ್ದು ಪ್ರಜ್ಞೆ ತಪ್ಪಿದಾಗ ವಿದ್ಯುತ್ ಕಂಬದಲ್ಲಿ ನೇತುಹಾಕಿ ಪರಾರಿಯಾಗಿದ್ದಾರೆ.
ಇದೇ ಮಾರ್ಗವಾಗಿ ಹೊಲಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮಹಿಳೆ ಬೆತ್ತಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮದುವೆ ಕೆಲಸಕ್ಕಾಗಿ ಬಂದಿದ್ದ 7 ಕಾರ್ಮಿಕರನ್ನು ಕೂಡಿ ಹಾಕಿ ವಿಚಾರಣೆ ನಡೆಸಲಾಗಿದೆ. ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
7 ಜನರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ಚಂದ್ರಕಾಂತ್ ಗೌರಿ ಹೇಳಿದ್ದಾರೆ. ಸದರ್ ಮಹಿಳಾ ಠಾಣೆ ಪೊಲೀಸರು ಮಹಿಳೆಯ ಹೇಳಿಕೆಯನ್ನು ಪಡೆದುಕೊಳ್ಳಲು ಆಸ್ಪತ್ರೆಗೆ ಹೋಗಿದ್ದಾರೆ. ಆದರೆ, ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಹಿಳೆ ಹೇಳಿಕೆ ನೀಡಲು ಸಾಧ್ಯವಾಗಿಲ್ಲ.