![Bihar: People Take Away Bundles of Currency Notes Found Floating in Rohtas Drain, Video Goes Viral | 📰 LatestLY](https://st1.latestly.com/wp-content/uploads/2023/05/Screen-Grab-of-Viral-Video.jpg)
ಚರಂಡಿ ನೀರಿನೊಳಗೆ ಕಂಡ ಹಣದ ನೋಟುಗಳನ್ನ ಪಡೆಯಲು ಜನ ಕೊಳಚೆ ನೀರಿಗಿಳಿದು ತಾಮುಂದು ನಾಮುಂದು ಎಂದು ಕೈಗೆ ಸಿಕ್ಕಷ್ಟು ಬಾಚಿಕೊಂಡಿದ್ದಾರೆ. ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಶನಿವಾರ ಮೊರಾದಾಬಾದ್ ಗ್ರಾಮದ ದೊಡ್ಡ ಚರಂಡಿಯಿಂದ ಕರೆನ್ಸಿ ನೋಟುಗಳನ್ನು ಹೊರತೆಗೆದಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವರು ಚರಂಡಿಗೆ ನುಗ್ಗಿ 2,000, 500, 100 ಮತ್ತು 10 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿರುವುದನ್ನು ಕಾಣಬಹುದು.
ಮುಂಜಾನೆ ಚರಂಡಿಯೊಳಗೆ ಕರೆನ್ಸಿ ನೋಟುಗಳಿರುವ ಚೀಲಗಳನ್ನು ನೋಡಿದ್ದೆವು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ನೋಟುಗಳನ್ನು ಸಂಗ್ರಹಿಸತೊಡಗಿದರು.
ನೋಟುಗಳು ಅಸಲಿ ಎಂದು ಕೂಡ ಜನ ಹೇಳಿಕೊಂಡಿದ್ದಾರೆ. ನೋಟುಗಳು ಅಸಲಿಯೇ? ಅವುಗಳನ್ನು ಯಾರು ಚರಂಡಿಗೆ ಎಸೆದಿದ್ದಾರೆ ಎಂಬ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.