ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 900 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಜಮಾ ಮಾಡಿದ ಆಶ್ಚರ್ಯಕರ ಘಟನೆಯೊಂದು ಬಿಹಾರ ಕತಿಹಾರ್ ಎಂಬಲ್ಲಿ ವರದಿಯಾಗಿದೆ. ಈ ಘಟನೆ ಬಳಿಕ ಗ್ರಾಮದ ಪ್ರತಿಯೊಬ್ಬರೂ ತಮ್ಮ ಖಾತೆಗೂ ಇದೇ ರೀತಿ ಹಣ ಬಂದಿರಬಹುದೇ ಎಂದು ನೋಡಲು ಎಟಿಎಂ ಮುಂದೆ ಸಾಲುಗಟ್ಟಿ ನಿಂತಿದ್ದರು ಎನ್ನಲಾಗಿದೆ.
ಉತ್ತರ ಪ್ರದೇಶದ ಗ್ರಾಮೀಣ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದ ಇಬ್ಬರು ವಿದ್ಯಾರ್ಥಿಗಳು ಸಮವಸ್ತ್ರ ಸಂಬಂಧಿ ಸೌಕರ್ಯಗಳಿಗೆ ಸರ್ಕಾರದಿಂದ ಹಣವನ್ನು ನಿರೀಕ್ಷಿಸುತ್ತಿದ್ದರು.
ಬರೋಬ್ಬರಿ 900 ಕೋಟಿ ರೂಪಾಯಿ ಜಮೆಯಾಗುತ್ತಿದ್ದಂತೆಯೇ ಆಘಾತಕ್ಕೊಳಗಾದ ವಿದ್ಯಾರ್ಥಿಗಳ ಪೋಷಕರು ಕೂಡಲೇ ಸೈಬರ್ ಕೆಫೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಷ್ಟೊಂದು ದೊಡ್ಡ ಮೊತ್ತದ ಹಣ ಖಾತೆಗೆ ಜಮೆಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.
6ನೇ ತರಗತಿ ವಿದ್ಯಾರ್ಥಿ ಆಶಿಷ್ ಖಾತೆಗೆ 6.2 ಕೋಟಿ ರೂಪಾಯಿ ಜಮೆಯಾಗಿದ್ದರೆ ಇನ್ನೊಬ್ಬ ವಿದ್ಯಾರ್ಥಿ ಗುರುಚರಣ್ ಎಂಬವನ ಖಾತೆಗೆ ಬರೋಬ್ಬರಿ 900 ಕೋಟಿ ರೂಪಾಯಿ ಜಮೆಯಾಗಿದೆ.
ಈ ಘಟನೆ ಬೆಳಕಿಗೆ ಬರ್ತಿದ್ದಂತೆ ಗ್ರಾಮಸ್ಥರೇ ಶಾಕ್ ಆಗಿದ್ದಾರೆ. ತಮಗೂ ಇದೇ ರೀತಿ ಅದೃಷ್ಟ ಖುಲಾಯಿಸಿದ್ದಿರಬಹುದೇ ಎಂಬುದನ್ನು ತಿಳಿದುಕೊಳ್ಳಲು ಎಟಿಎಂನತ್ತ ಧಾವಿಸಿದ್ದರು ಎನ್ನಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕತಿಹಾರ್ ಜಿಲ್ಲಾಧಿಕಾರಿ ಉದಯನ್ ಮಿಶ್ರಾ, ದೊಡ್ಡ ಮೊತ್ತದ ಹಣ ವಿದ್ಯಾರ್ಥಿಗಳ ಖಾತೆಗೆ ಜಮೆಯಾಗಿರುವ ಬಗ್ಗೆ ವರದಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬ್ಯಾಂಕ್ನ ಶಾಖೆಗೂ ಭೇಟಿ ನೀಡಿ ತನಿಖೆ ನಡೆಸಲಾಗಿದೆ. ಈ ವೇಳೆ ಶಾಖಾ ಮ್ಯಾನೇಜರ್ ತಾಂತ್ರಿಕ ದೋಷದಿಂದಾಗಿ ಈ ರೀತಿಯಾಗಿದೆ ಎಂದು ಹೇಳಿದ್ದಾರೆ. ಸ್ಟೇಟ್ಮೆಂಟ್ಗಳಲ್ಲಿ ಅಷ್ಟೊಂದು ದೊಡ್ಡ ಮೊತ್ತ ಜಮೆಯಾದ ಬಗ್ಗೆ ಮಾಹಿತಿಯಿದೆ. ಆದರೆ ವಿದ್ಯಾರ್ಥಿಗಳ ಖಾತೆಯಲ್ಲಿ ಅಷ್ಟೆಲ್ಲ ಹಣವಿಲ್ಲ ಎಂದು ಹೇಳಿದರು.