ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಎನ್.ಡಿ.ಎ. ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ನಿತೀಶ್ ಅವರ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್.ಡಿ.ಎ. 125, ಸ್ಥಾನಗಳನ್ನು, ಆರ್.ಜೆ.ಡಿ. ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಸ್ಥಾನಗಳಲ್ಲಿ ಜಯಗಳಿಸಿದೆ.
ಜೆಡಿಯು ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಸಿದೆ. ಕಳೆದ ಸಲ 71 ಸ್ಥಾನಗಳಿಸಿದ್ದು, ಈ ಬಾರಿ 43 ಸ್ಥಾನಗಳಿಸಿ ನೀರಸ ಪ್ರದರ್ಶನ ನೀಡಿದೆ. ಹೀಗಿದ್ದರೂ ಕೂಡ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಾಗಿದೆ. ಈ ಮೊದಲೇ ಆಗಿದ್ದ ಒಪ್ಪಂದದಂತೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಎನ್.ಡಿ.ಎ. ಶಾಸಕಾಂಗ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಘೋಷಿಸಲಾಗಿದ್ದು, ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಜೆಡಿಯು, ಬಿಜೆಪಿ, ಹೆಚ್.ಎ.ಎಂ(ಎಸ್), ವಿಐಪಿ ಪಕ್ಷಗಳನ್ನು ಒಳಗೊಂಡ ಎನ್.ಡಿ.ಎ. ಮೈತ್ರಿಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.