ಪಾಟ್ನಾ : ಮಕ್ಕಳನ್ನು ಹೆದರಿಸುವುದಕ್ಕಾಗಿ ಸಚಿವರ ಮಗನೊಬ್ಬ ಗುಂಡು ಹಾರಿಸಿರುವ ಘಟನೆ ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ನಾರಾಯಣ್ ಶಾ ಅವರ ಮಗ ಬಬ್ಲು ಕುಮಾರ್ ಎಂಬಾತನೇ ಈ ರೀತಿ ವರ್ತಿಸಿದ್ದಾನೆ ಎಂದು ತಿಳಿದು ಬಂದಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಬಾಲಕರು ಗಾಬರಿಗೊಂಡು ಓಡಲು ಹೋಗಿ ಕಾಲ್ತುಳಿತ ಉಂಟಾಗಿದೆ.
ಘಟನೆಯಲ್ಲಿ ಓರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, 6 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಓಡಿಸುವುದಕ್ಕಾಗಿ ಸಚಿವರ ಮಗ ಈ ರೀತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆಯ ಸುದ್ದಿ ಕೇಳುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು ಸಚಿವರ ಮಗನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಆ ವ್ಯಕ್ತಿಯ ಕೈಯಲ್ಲಿದ್ದ ಬಂದೂಕನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಗ್ರಾಮಸ್ಥರಿಂದ ಹಲ್ಲೆಗೊಳಗಾದ ಸಚಿವರ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಗೆ ಸಾರ್ವಜನಿಕರದ್ದೇ ತಪ್ಪು ಎಂದು ಸಚಿವರು ಆರೋಪಿಸಿದ್ದಾರೆ. ಅಲ್ಲದೇ, ನನ್ನ ಮಗ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡುವುದಕ್ಕಾಗಿ ಮಗನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದೂಕನ್ನು ಪೊಲೀಸರು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.