ಬಿಹಾರದ ನಳಂದಾ ಜಿಲ್ಲೆಯ ಸೊಸಂಡಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಪುತ್ರ ರಾಹುಲ್ ಕುಮಾರ್ ಪ್ರತಿಷ್ಠಿತ ಐಐಟಿ-ರೂರ್ಕಿ ಸಂಸ್ಥೆಯಲ್ಲಿ ಚಿನ್ನದನ ಪದಕದೊಂದಿಗೆ ಪದವಿ ಪೂರೈಸಿದ್ದು, ಉನ್ನತ ವ್ಯಾಸಾಂಗ ಮಾಡಲು ವಿದೇಶಿ ವಿವಿಯಿಂದ ಸ್ಕಾಲರ್‌ಶಿಪ್ ಸಹ ಪಡೆದಿದ್ದಾರೆ.
22 ವರ್ಷದ ರಾಹುಲ್ ಕುಮಾರ್ ತಂದೆ ಸುನೀಲ್ ಸಿಂಗ್(52) ಸೂರತ್‌ನ ಜವಳಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಮಾರ್ ಹಾಗೂ ಆತನ ನಾಲ್ವರು ಒಡಹುಟ್ಟಿದವರನ್ನು ಸಾಕಲು ಸಾಧ್ಯವಾಗುವಷ್ಟು ಸಂಪಾದನೆಯನ್ನು ತಮ್ಮ ಬಳಿ ಇದ್ದ ಪುಟ್ಟ ಜಮೀನಿನಲ್ಲಿ ಸಂಪಾದಿಸಲು ಸಾಧ್ಯವಾಗದ ಕಾರಣ ಸುನೀಲ್ ಸೂರತ್‌ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು.
ವಿಧ್ಯಾಭ್ಯಾಸದಲ್ಲಿ ಮಾತ್ರವಲ್ಲದೇ, ಸಾಮಾಜಿಕ ಕಳಕಳಿಯ ವಿಷಯದಲ್ಲೂ ಸಹ ಮುಂದಿರುವ ರಾಹುಲ್, ಐಐಟಿ-ರೂರ್ಕಿಯ ರಾಷ್ಟ್ರೀಯ ಸೇವಾ ಯೋಜನೆಯ ಮಹಾ ಕಾರ್ಯದರ್ಶಿ ಸಹ ಆಗಿದ್ದಾರೆ.
ಡಿಜಿಟಲ್ ಕಾನ್ಫರೆನ್ಸ್ ಮೂಲಕ ಹಮ್ಮಿಕೊಳ್ಳಲಾದ ಪದವಿ ಪ್ರದಾನ ಸಮಾರಂಭದ ವೇಳೆ ರಾಹುಲ್‌ಗೆ ಬಿ.ಟೆಕ್ ಪದವಿಯೊಂದಿಗೆ ತಮ್ಮ ಸಾಮಾಜಿಕ ಕಳಕಳಿಯ ಚಟುವಟಿಕೆಗಳಿ ರಾಷ್ಟ್ರಪತಿಗಳ ಡಾ. ಶಂಕರ್ ದಯಾಳ್ ಶರ್ಮಾ ಚಿನ್ನದ ಪದಕ ಗೌರವ ಪ್ರದಾನ ಮಾಡಲಾಗಿದೆ.
ಇದೀಗ ಅಮೆರಿಕದ ಯೂಟಾದ ವಿವಿಯಲ್ಲಿ ಪಿಹೆಚ್‌ಡಿ ಮಾಡಲು ಕುಮಾರ್‌ಗೆ ಸ್ಕಾಲರ್‌ಶಿಪ್ ಸಿಕ್ಕಿದ್ದು, ಅಲ್ಲಿ ಸಹ ಪ್ರಾಧ್ಯಾಪಕನಾಗಿ ಕೆಲಸ ಮಾಡಿಕೊಂಡು ಉನ್ನತ ವ್ಯಾಸಾಂಗ ಮಾಡುವ ಅವಕಾಶವನ್ನೂ ನೀಡಲಾಗಿದೆ.