
ಬಿಹಾರದಲ್ಲಿ ಯುವಕನೊಬ್ಬ 20 ದಿನದ ಅಂತರದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ್ದಾನೆ. ಇಬ್ಬರು ಮಹಿಳೆಯರ ಮನೆಗಳಲ್ಲಿ ಯುವಕನನ್ನು ಗ್ರಾಮಸ್ಥರು ಹಿಡಿದ ನಂತರ ಅವರಿಗೆ ತಾಳಿ ಕಟ್ಟುವಂತೆ ಯುವಕನನ್ನು ಒತ್ತಾಯಿಸಿದ್ದರಿಂದ ಇಂತಹ ವಿಲಕ್ಷಣ ಸರಣಿ ವಿವಾಹಗಳು ನಡೆದವು. ಜಮುಯಿ ಜಿಲ್ಲೆಯ ವಿನೋದ್ ಕುಮಾರ್ ಕೆಲವೇ ದಿನಗಳಲ್ಲಿ ಎರಡು ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾನೆ.
ಅಕ್ಷರ ಗ್ರಾಮದ ನಿವಾಸಿಯಾಗಿರುವ ಯುವಕ ಮೊದಲು ಆನ್‌ಲೈನ್‌ನಲ್ಲಿ ಪರಿಚಯವಾದ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದಿದ್ದ. ನವಕಡಿಹ್ ಗ್ರಾಮದ ನಿವಾಸಿ ಪ್ರೀತಿ ಕುಮಾರಿ ಯನ್ನು ಕುಮಾರ್ ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು ಮಗುವನ್ನ ಹೊಂದಿದ್ದಳು.
ಆನ್‌ಲೈನ್‌ನಲ್ಲಿ ಆಗಾಗ್ಗೆ ಮಾತನಾಡುತ್ತಾ ಪ್ರೀತಿ ಕುಮಾರಿ, ವಿನೋದ್ ಕುಮಾರ್ ನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಭೇಟಿಯಾಗಲು ನಿರ್ಧರಿಸಿ ಯೋಜಿಸಿದಂತೆ ವಿನೋದ್ ಕುಮಾರ್ ಏಪ್ರಿಲ್ 22 ರಂದು ಪ್ರೀತಿಕುಮಾರಿಯ ಮನೆಗೆ ಬಂದಿದ್ದ. ಆದರೆ ಭೇಟಿಯು ಅಂದುಕೊಂಡಂತೆ ಆಗಲಿಲ್ಲ. ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಮಹಿಳೆಗೆ ದೇವಸ್ಥಾನದಲ್ಲಿ ತಾಳಿ ಕಟ್ಟುವಂತೆ ಒತ್ತಾಯಿಸಿದರು. ತರುವಾಯ ಇಬ್ಬರೂ ಒಟ್ಟಿಗೆ ಬಾಳಲು ಆರಂಭಿಸಿದರು.
ಈ ಪ್ರೇಮಕಥೆ ಮುಂದುವರೆದಂತೆ ವಿನೋದ್ ಕುಮಾರ್ ಗೆ ಗ್ರಾಮದಲ್ಲಿ ಡಿಜೆ ಕೆಲಸ ಮಾಡುತ್ತಿದ್ದ ಗಿರಿಜಾ ಕುಮಾರಿ ಎಂಬ ಗರ್ಲ್ ಫ್ರೆಂಡ್ ಇದ್ದಳು. ಮದುವೆಯ ಹೊರತಾಗಿಯೂ ಕುಮಾರ್ ತನ್ನ ಗೆಳತಿಯೊಂದಿಗೆ ಸಂಬಂಧವನ್ನು ಮುಂದುವರೆಸಿದ್ದ. ಈ ವೇಳೆ ಆತ ತನ್ನ ಗೆಳತಿಯ ಮನೆಯಲ್ಲಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಪರಿಣಾಮವಾಗಿ, ಗ್ರಾಮಸ್ಥರು ಆಕೆಯನ್ನು ಮದುವೆಯಾಗುವಂತೆ ವಿನೋದ್ ಕುಮಾರ್ ನನ್ನು ಒತ್ತಾಯಿಸಿದರು.
ಇದರಿಂದಾಗಿ ಆತ ಕೇವಲ 20 ದಿನಗಳಲ್ಲಿ ಇಬ್ಬರು ಮಹಿಳೆಯರಿಗೆ ಪತಿಯಾದ. ಎರಡನೇ ಮದುವೆಯ ನಂತರ, ಅವನ ಮೊದಲ ಹೆಂಡತಿ ಗಂಡನ ಮರುಮದುವೆ ಬಗ್ಗೆ ದೂರು ದಾಖಲಿಸಿದಳು. ಆದರೆ ಆತನ ಎರಡನೇ ಪತ್ನಿ ಸಂಸಾರದೊಂದಿಗೆ ಬಾಳುವುದು ಸಂತಸ ತಂದಿದೆ ಎಂದಿದ್ದಾರೆ. ಏತನ್ಮಧ್ಯೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.