ಧರ್ಮ ಜಾತಿಯ ಹೆಸರಲ್ಲಿ ಮನುಷ್ಯ ಮಾಡುತ್ತಿರುವ ಪಾಪಕಾಂಡಗಳು ಒಂದೆರಡಲ್ಲ. ಮರ್ಯಾದೆ ಹೆಸರಲ್ಲಿ ಅಣ್ಣ-ತಂಗಿಯಲ್ಲಿ, ಅಪ್ಪ-ಮಗಳನ್ನ, ಹಿಂದೆ ಮುಂದೆ ನೋಡದೇ ಹತ್ಯೆ ಮಾಡಿಬಿಡ್ತಾರೆ. ಈಗ ಇಂತಹದ್ದೇ ಒಂದು ಪ್ರಕರಣ ಬಿಹಾರ್‌ನಲ್ಲಿ ಮತ್ತೆ ಸಂಭವಿಸಿದೆ.
ಕುಟುಂಬದ ವಿರುದ್ಧವಾಗಿ ತನ್ನ ಮಗಳನ್ನ ಮದುವೆಯಾದ ಅನ್ಯಜಾತಿಯ ಹುಡುಗನನ್ನು ಮಾವನೇ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಈ ಭೀಕರ ಕೊಲೆಯ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅದೊಂದು ಕ್ಷೌರಿಕನ ಅಂಗಡಿ ಅಲ್ಲಿ ಕೆಲ ಜನ ಗ್ರಾಹಕರು ಶೇವ್, ಹೇರ್‌ಕಟ್ ಮಾಡಿಕೊಳ್ಳಲು ಬಂದಿದ್ದರು. ಅದೇ ಸಮಯದಲ್ಲಿ ಓರ್ವ ವ್ಯಕ್ತಿ ಗನ್ ಹಿಡಿದುಕೊಂಡು, ಹೇರ್ ಕಟಿಂಗ್ ಶಾಪ್ ಒಳಗೆ ಬಂದಿದ್ದಾನೆ. ಬಂದ ತಕ್ಷಣವೇ ಫೈರಿಂಗ್ ಶುರು ಮಾಡಿದ್ದಾನೆ. ತಕ್ಷಣವೇ ಅಲ್ಲೇ ಕುರ್ಚಿ ಮೇಲಿದ್ದ ವ್ಯಕ್ತಿ ಎದ್ದು ತಪ್ಪಿಸಿಕೊಂಡಿದ್ದಾನೆ. ಆ ತಕ್ಷಣವೇ ದುಷ್ಕರ್ಮಿಗಳು ಆ ವ್ಯಕ್ತಿಯನ್ನ ಮೂಲೆಗೆ ಎಳೆದುಕೊಂಡು ಹೋಗಿ ಹೊಡೆದಿದ್ದಾರೆ. ನಂತರ ಆತನ ಕುತ್ತಿಗೆ ಮೇಲೆ ಕಾಲಿಟ್ಟು ಪದೇ ಪದೇ ಗುಂಡು ಹೊಡೆದು ಸಾಯಿಸಿದ್ದಾರೆ.
ಬಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, ಮಗಳು ಬೇರೆ ಜಾತಿಯ ಹುಡುಗನನ್ನ ಮದುವೆ ಆಗಿದ್ದೇ ಈ ಆಘಾತಕಾರಿ ಘಟನೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಮಾವನೇ ಅಳಿಯನನ್ನ ಗುಂಡು ಹೊಡೆದು ಸಾಯಿಸಿದ್ದಾನೆ. ಇದೆಲ್ಲವೂ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೊಲೆಯಾದವನನ್ನು ಮೋನು ರೈ ಎಂದು ಗುರುತಿಸಲಾಗಿದ್ದು, ಈತ ಸ್ಥಳೀಯ ನಗರಸಭಾ ಸದಸ್ಯ ಸೋನು ರೈ ಅವರ ಸಹೋದರ. ಮಾವ ಸುನೀಲ್ ಪಾಠಕ್, ಈಗ ಶರಣಾಗಿದ್ದಾನೆ. ಇವರ ಪುತ್ರ ಧನು ಪಾಠಕ್ ಕೂಡಾ ಪ್ರಕರಣದಲ್ಲಿ ಪಾಲುದಾರನಾಗಿದ್ದಾನೆ. ಸಿಸಿ ಟಿವಿ ದೃಶ್ಯದ ಆಧಾರದಿಂದ ಆರೋಪಿಗಳನ್ನ ಗುರುತಿಸಲಾಗಿದ್ದು, ಅವರನ್ನ ಈಗ ಬಂಧಿಸಲಾಗಿದೆ.