ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಒಂದು ತಮಾಷೆಯ ಘಟನೆ ನಡೆದಿದೆ. ಈಶ್ವರ ಯಾದವ್ ಎಂಬಾತ ಪೊಲೀಸ್ ನಾಯಿಯು ತನ್ನತ್ತ ಮೂಸುತ್ತಾ ಬಂದಿದ್ದಕ್ಕೆ ಹೆದರಿಕೊಂಡು ನದಿಗೆ ಜಿಗಿದುಬಿಟ್ಟಿದ್ದಾನೆ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ ತಂದೆಯು ನದಿಗೆ ಹಾರಿ ನಾಪತ್ತೆ ಆಗಿದ್ದಾರೆ ಎಂದು ಮಗ ಗುಡ್ಡು ಕುಮಾರ್, ಅದೇ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟು ಬಂದಿದ್ದಾನೆ.
ಅಲ್ಲದೇ ಪೊಲೀಸರೇ ನನ್ನ ತಂದೆಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾನೆ ಗುಡ್ಡು ಕುಮಾರ್..!
ಆಗಿದ್ದೇನೆಂದರೆ, ಗ್ರಾಮದ ಕೃಷಿ ಭೂಮಿಯಲ್ಲಿ ಈಶ್ವರ್ ಯಾದವ್ ಕೆಲಸದಲ್ಲಿ ನಿರತರಾಗಿದ್ದರು. ಕಳ್ಳಭಟ್ಟಿ ದಂಧೆ ವ್ಯಾಪಕವಾಗಿದ್ದ ಈ ಪ್ರದೇಶದಲ್ಲಿ ಪೊಲೀಸರೊಂದಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಗೆ ಮುಂದಾಗಿದ್ದರು.
ಅದೇ ವೇಳೆ, ಈಶ್ವರ್ ಇದ್ದಂತಹ ಕೃಷಿ ಭೂಮಿಯ ಸುತ್ತಲೂ ತಮ್ಮ ತರಬೇತಿ ಪಡೆದ ನಾಯಿಯನ್ನು ಪೊಲೀಸರು ಮೂಸುವುದಕ್ಕಾಗಿ ಬಿಟ್ಟಿದ್ದಾರೆ. ಅದು ಕೂಡ ಕಳ್ಳಭಟ್ಟಿಯ ವಾಸನೆ ಹುಡುಕುತ್ತಾ ಸಾಗಿದೆ.
ಸ್ವಲ್ಪ ದೂರದಲ್ಲೇ ಈಶ್ವರ್ ನಾಯಿಗೆ ಮುಖಾಮುಖಿ ಆಗಿದ್ದಾರೆ. ಗಾಬರಿಗೊಂಡ ಅವರು ಓಡಲು ಶುರುಮಾಡಿದಾಗ ನಾಯಿ ಕೂಡ ಸಹಜವಾಗಿ ಬೆನ್ನಟ್ಟಿದೆ.
ಆತ ಸೀದಾ ಹೋಗಿ ಸಮೀಪದ ಗಂಡಕ್ ನದಿಗೆ ಜಿಗಿದಿದ್ದಾನೆ.
ಇದನ್ನೇ ನೆಪಮಾಡಿಕೊಂಡು ಈಶ್ವರ್ ಪುತ್ರ ಗುಡ್ಡು ಕುಮಾರ್, ಪೊಲೀಸರ ಮೇಲೆ ಮುಗಿಬಿದ್ದಿದ್ದಾನೆ. ತಂದೆಯು ನದಿಪಾಲಾಗಿದ್ದಾರೆ. ಪೊಲೀಸರೇ ಹತ್ಯೆಗೈದಿದ್ದಾರೆ. ತಂದೆ ನಾಪತ್ತೆಯಾಗಿರುವುದು ಕುಟುಂಬಕ್ಕೆ ಚಿಂತೆ ಮೂಡಿಸಿದೆ ಎಂದು ದೂರು ದಾಖಲಿಸಿದ್ದಾನೆ. ಆತಂಕಕ್ಕೆ ಒಳಗಾದ ಪೊಲೀಸರು ರಾಜ್ಯ ನೈಸರ್ಗಿಕ ವಿಕೋಪ ರಕ್ಷಣಾ ಪಡೆ (ಎಸ್ಡಿಆರ್ಎಫ್) ಸಿಬ್ಬಂದಿಯನ್ನು ಕರೆಸಿ ಗ್ರಾಮದಲ್ಲಿ ಪೂರ್ಣ ಶೋಧಕಾರ್ಯ ನಡೆಸಿದ್ದಾರೆ. ಆದರೂ ಈಶ್ವರ್ ಪತ್ತೆಯಾಗಿಲ್ಲ.
ಅಬಕಾರಿ ಇಲಾಖೆ ಪ್ರಕಾರ, ಅವರು ತೆರಳಿದ್ದು ಕಳ್ಳಭಟ್ಟಿ ಹುಡುಕಲು ಮಾತ್ರವೇ. ಅವರ ಬಳಿ ಆಗಲಿ ಅಥವಾ ಜತೆಗಿದ್ದ ಪೊಲೀಸರ ಬಳಿ ಆಗಲಿ ಯಾವುದೇ ನಾಯಿ ಇರಲಿಲ್ಲ ಎಂದು ದೂರುದಾರನಿಗೆ ತಿರುಗೇಟು ಕೊಟ್ಟಿದ್ದಾರೆ.