ಅಪ್ರಾಪ್ತ ವಯಸ್ಕರು ಸೇರಿದಂತೆ 12 ಹುಡುಗಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ 32 ವರ್ಷದ ವ್ಯಕ್ತಿಯನ್ನು ಬಿಹಾರದ ಪುರ್ನಿಯಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮೊಹಮ್ಮದ್ ಶಂಶಾದ್ ಅಲಿಯಾಸ್ ಮನೋಹರ್ ಎಂದು ಗುರುತಿಸಲಾಗಿದ್ದು, ಆತ ಕಿಶನ್ ಗಂಜ್ ಜಿಲ್ಲೆಯ ಕೊಚ್ಚದಮನ್ ಪೊಲೀಸ್ ಠಾಣೆ ವ್ಯಾಪ್ತಿಯ ಅನಾರ್ಕಲಿ ಗ್ರಾಮದ ನಿವಾಸಿಯಾಗಿದ್ದಾನೆ.
ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸುತ್ತಿದ್ದ ಶಂಶಾದ್ ನನ್ನು ಬಿಹಾರದ ಕಿಶನ್ ಗಂಜ್ ಜಿಲ್ಲೆಯ ಬಹದ್ದೂರ್ ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯಿದಂಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಡಿಸೆಂಬರ್ 8, 2015 ರಂದು ಎಫ್‌ಐಆರ್ ದಾಖಲಾಗಿದ್ದು, ಪರಾರಿಯಾಗಿದ್ದ ಎಂದು ಅಂಗರ್ಹ್ ಎಸ್‌ಹೆಚ್‌ಒ ಪೃಥ್ವಿ ಪಾಸ್ವಾನ್ ಹೇಳಿದ್ದಾರೆ.
2015 ರ ನವೆಂಬರ್ 27 ರಂದು ತನ್ನ ಅಪ್ರಾಪ್ತ ಮಗಳನ್ನು ಮದುವೆಯಾಗುವ ನೆಪದಲ್ಲಿ ಶಂಶಾದ್ ಅಪಹರಿಸಿದ್ದಾನೆ ಎಂದು ಅಂಗರ್ಹ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜ್ವಾರ್ ನಿವಾಸಿ ಮೊಹಮ್ಮದ್ ಹಸೀಬ್ ಅರ್ಜಿ ಸಲ್ಲಿಸಿದ್ದರು. ನಂತರ, ಪೊಲೀಸರು ಕಿಶನ್ ಗಂಜ್ ಎಲ್.ಆರ್.ಪಿ. ಚೌಕ್ ನಿಂದ ಅಪಹರಣಕ್ಕೊಳಗಾದ ಬಾಲಕಿಯನ್ನು ರಕ್ಷಿಸಿದ್ದಾರೆ. ಶಂಶಾದ್ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದ.
ಕೊನೆಗೆ ಆತನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಶಂಶಾದ್ ತನ್ನ ಕೃತ್ಯವನ್ನು ಬಹಿರಂಗಪಡಿಸಿದ್ದಾನೆ. ಪೊಲೀಸರ ಪ್ರಕಾರ, ಆರೋಪಿ 12 ಹುಡುಗಿಯರನ್ನು ಮದುವೆಯಾಗಿದ್ದು, ಅದರಲ್ಲಿ 8 ಮಂದಿ ಅಪ್ರಾಪ್ತರಾಗಿದ್ದರು.
ಶಂಶಾದ್ ಅಮಾಯಕ ಹುಡುಗಿಯರನ್ನು ಮದುವೆಯಾಗಿ ನಂತರ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ. ಎಲ್ಲಾ ಹುಡುಗಿಯರು ಒಂದೇ ಸಮುದಾಯದವರು. ಕಿಶನ್ ಗಂಜ್ ಜಿಲ್ಲೆಯ ಠಾಕೂರ್ ಗಂಜ್‌ನ ರೆಡ್ ಲೈಟ್ ಏರಿಯಾದಲ್ಲಿ ಹುಡುಗಿಯರನ್ನು ವೇಶ್ಯಾವಾಟಿಕೆಗೆ ನೂಕುತ್ತಿದ್ದ. ನಂತರ ಹೆಚ್ಚಿನ ಹಣಕ್ಕಾಗಿ ಕೆಲವು ಬಾಲಕಿಯರನ್ನು ಬಂಗಾಳದಲ್ಲಿ ಮಾರಾಟ ಮಾಡಿದ್ದಾನೆ. 12 ಬಾಲಕಿಯರ ಪೈಕಿ 2 ಮಂದಿ ಅಂಗರ್ಹ್ ಪೊಲೀಸ್ ಠಾಣೆ ವ್ಯಾಪ್ತಿಯವರು, 10 ಮಂದಿ ಕಿಶನ್‌ಗಂಜ್ ಜಿಲ್ಲೆಯವರು. ಪೊಲೀಸರು ಎಲ್ಲ ಬಾಲಕಿಯರ ಪತ್ತೆಗೆ ಕ್ರಮಕೈಗೊಂಡಿದ್ದಾರೆ.