ಸಿಹಿ ತಿಂಡಿ ಕದ್ದು ತಿನ್ನುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಬಿಹಾರ ಕೋರ್ಟ್ ಖುಲಾಸೆಗೊಳಿಸಿದ ಸ್ವಾರಸ್ಯಕರ ಘಟನೆಯೊಂದು ನಡೆದಿದೆ.
ಬಾಲ ನ್ಯಾಯಮಂಡಳಿ ನ್ಯಾಯಾಧೀಶರಾದ ಮನ್ವೇಂದ್ರ ಮಿಶ್ರಾ ಶ್ರೀಕೃಷ್ಣ ಪರಮಾತ್ಮ ಬೆಣ್ಣೆ ಕಳ್ಳತನದ ಘಟನೆಯನ್ನು ಉದಾಹರಣೆ ರೂಪದಲ್ಲಿ ನೀಡಿ ಬಾಲಕನನ್ನು ಖುಲಾಸೆಗೊಳಿಸಿದ್ರು.
ಬಿಹಾರದ ನಲಂದಾ ಜಿಲ್ಲೆಯ ಹರ್ನೌಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಶ್ರೀಕೃಷ್ಣ ಬೆಣ್ಣೆ ಕದ್ದು ತಿನ್ನುವುದು ತುಂಟತನ ಎಂದು ಒಪ್ಪಲಾಗಿದೆ ಅಂದ ಮೇಲೆ ಬಾಲಕ ಅದರಲ್ಲೂ ಹಸಿವಿನಿಂದ ಬಳಲುತ್ತಿದ್ದ ಬಾಲಕ ಸಿಹಿ ತಿಂಡಿ ಕದ್ದು ತಿಂದಿದ್ದನ್ನು ಅಪರಾಧ ಎಂದು ಹೇಗೆ ಪರಿಗಣಿಸಲು ಸಾಧ್ಯ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಶ್ರೀಕೃಷ್ಣನ ಕತೆಯನ್ನು ಒಪ್ಪಿಕೊಳ್ಳುವ ನಾವು ಈ ಬಾಲಕನಿಗೆ ಶಿಕ್ಷೆ ನೀಡಿದರೆ ಅದು ಇಬ್ಭಗೆಯ ನೀತಿ ಆಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಅಲ್ಲದೇ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಯ ನಡೆಯ ಬಗ್ಗೆಯೂ ವಿಪರೀತ ಅಸಮಾಧಾನ ಹೊರಹಾಕಿದ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸುವ ಬದಲು ಠಾಣೆಯಲ್ಲಿಯೇ ಸಂಧಾನ ಕಾರ್ಯ ನಡೆಸುವುದು ಹೆಚ್ಚು ಸೂಕ್ತವಿತ್ತು ಎಂದು ಹೇಳಿದೆ.
ಅಲ್ಲದೇ ಮಹಿಳಾ ದೂರುದಾರ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಾಧೀಶ ಮಿಶ್ರಾ, ನಿಮ್ಮ ಮಗುವು ನಿಮ್ಮ ಪರ್ಸಿನಿಂದ ಹಣ ಕದ್ದು ಸಿಹಿ ತಿಂದಿದ್ದರೆ ಆ ಮಗುವನ್ನೂ ಜೈಲಿಗೆ ಅಟ್ಟುತ್ತಿದ್ರಾ ಎಂದು ಕೇಳಿದ್ದಾರೆ.