ಪಾಟ್ನಾ: ಬಿಹಾರದ ಪನ್ ಪುನ್ ನಲ್ಲಿ ಜೆಡಿಯು ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜೆಡಿಯು ನಾಯಕ ಸೌರಭ್ ಕುಮಾರ್ ಬುಲೆಟ್ ದಾಳಿಗೆ ಬಲಿಯಾಗಿದ್ದಾರೆ. ಅವರ ಸ್ನೇಹಿತ ಮುನ್‌ಮುನ್‌ಗೆ ಗಂಭೀರ ಗಾಯಗಳಾಗಿವೆ.
ಇಬ್ಬರೂ ಪಾಟ್ನಾದಿಂದ ತಡರಾತ್ರಿ ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಪರಿಸ್ಥಿತಿ ಲಾಭ ಪಡೆದ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬೈಕ್‌ನಲ್ಲಿ ಬಂದ ಅಪರಿಚಿತ ನಾಲ್ವರು ವ್ಯಕ್ತಿಗಳಿಂದ ದಾಳಿ ನಡೆದಿದ್ದು, ಸೌರಭ್‌ಗೆ ಎರಡು ಗುಂಡುಗಳು ತಾಗಿವೆ. ಅವರ ಸ್ನೇಹಿತ ಮುನ್ಮುನ್ ಕುಮಾರ್ ಗೆ 3 ಗುಂಡು ತಗುಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಸೌರಭ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ಮುನ್ಮುನ್ ಅವರನ್ನು ಗಂಭೀರ ಸ್ಥಿತಿಯಲ್ಲಿ ದಾಖಲಿಸಲಾಯಿತು.
ಸೌರಭ್ ಕುಮಾರ್ ತನ್ನ ಸ್ನೇಹಿತರೊಂದಿಗೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ, ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುನ್ಮುನ್ ಕುಮಾರ್ ಎಂಬ ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿವೆ. ಅವರನ್ನು ಕಂಕರ್ಬಾಗ್ ಉಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು; ಆದರೆ, ಆ ವೇಳೆಗಾಗಲೇ ಸೌರಭ್ ಕುಮಾರ್ ಮೃತಪಟ್ಟಿದ್ದರು ಎಂದು ಎಸ್‌ಡಿಪಿಒ ಮಸೌರಿ ಕನ್ಹಯ್ಯಾ ಸಿಂಗ್ ತಿಳಿಸಿದ್ದಾರೆ.
ಘಟನೆಯ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಆರೋಪಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ.
ಘಟನೆಯು ಏಪ್ರಿಲ್ 24 ರಂದು ಮಧ್ಯರಾತ್ರಿ 12:15 ರ ಸುಮಾರಿಗೆ ಪನ್‌ಪುನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಧಿಯಾಕೋಲ್‌ನಲ್ಲಿ ಸಂಭವಿಸಿದ್ದು, ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ರಸ್ತೆಗಳನ್ನು ತಡೆದು ಪ್ರತಿಭಟಿಸಿದರು. ಪನ್‌ಪುನ್ ಎನ್‌ಹೆಚ್ 83 ರಲ್ಲಿ ಹಲವಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಸ್ಥಳೀಯ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು.