ಛಾಪ್ರಾ: ಕಳ್ಳಭಟ್ಟಿ ಸೇವಿಸಿ 28 ಜನರು ಸಾವನ್ನಪ್ಪಿದ್ದು ಹಲವರು ದೃಷ್ಟಿ ಕಳೆದುಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹರದ ಸಿವಾನ್ ಹಾಗೂ ಛಾಪ್ರಾದಲ್ಲಿ ಈ ದುರಂತ ಸಂಭವಿಸಿದೆ. ಕಳ್ಳಭಟ್ಟಿ ಸೇವಿಸಿ ಈವರೆಗೆ 28 ಜನರು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನ ದೃಷ್ಟಿ ಕಳೆದುಕೊಂಡಿದ್ದಾರೆ. ಅಸ್ವಸ್ಥರಾಗಿರುವ ಹಲವರನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿವಾನ್ ಹಾಗೂ ಛಾಪ್ರಾ ಜಿಲ್ಲಾಡಳಿತಗಳು ಮಾತ್ರ ಸಿವಾನ್ ನಲ್ಲಿ ಕೇವಲ 4 ಜನ ಹಾಗೂ ಛಾಪ್ರಾದಲ್ಲಿ ಇಬ್ಬರು ಕಳ್ಳಭಟ್ಟಿ ಸಾರಾಯಿಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿವೆ.
ಆದರೆ ಸಿವಾನ್ ನ ಭಗವಾನ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ಮಘರ್ ಗ್ರಾಮದಲ್ಲಿ ಪಾಲಿಥಿನ್ ಮಿಶ್ರಿತ ಮದ್ಯ ಸೇವಿಸಿ ಜನರು ಅನಾರೋಗ್ಯಕ್ಕೀಡಾಗಿದ್ದು ವಾಂತಿ, ಭೇದಿ, ದೃಷ್ಟಿದೋಷದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ 24 ಜನರು ಸಾವನ್ನಪ್ಪಿದ್ದಾರೆ. ನಾಲ್ವರು ದೃಷ್ಟಿ ಕಳೆದುಕೊಂಡಿದ್ದಾರೆ.
ಇನ್ನೊಂದೆಡೆ ಛಾಪ್ರಾದ ಇಬ್ರಾಹಿಂಪುರ ಗ್ರಾಮದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಕುಟುಂಬದವರು ಹೇಳುವ ಪ್ರಕಾರ ಮಂಗಳವಾರ ರಾತ್ರಿ ಮದ್ಯ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದರು. ಬಳಿಕ ನಾಲ್ವರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಇನ್ನು ಕಳ್ಳಭಟ್ಟಿ ಸೇವಿಸಿದ ಸಿವಾನ್, ಸರನ್ ಜಿಲ್ಲೆ ಸೇರಿದಂತೆ 49 ಜನರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.