ಬಿಹಾರದಲ್ಲಿ ವರನೊಬ್ಬ ಕುಡಿದು ಟೈಟಾಗಿ ಮದುವೆಗೆ ಹಾಜರಾಗುವುದನ್ನೇ ಮರೆತಿದ್ದಾನೆ. ಇದರಿಂದ ಆಕ್ರೋಶಗೊಂಡ ವಧುವಿನ ಕುಟುಂಬ ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ.
ಭಾಗಲ್ಪುರದ ಸುಲ್ತಂಗಂಜ್ ಗ್ರಾಮದ ವರನೊಬ್ಬ ತನ್ನ ಮದುವೆಗೆ ಹಾಜರಾಗಲು ಮರೆತಿದ್ದಾನೆ. ಆತ ಹಿಂದಿನ ರಾತ್ರಿ ಕುಡಿದು ಮಲಗಿದ್ದ. ವಧು ಮತ್ತು ಆಕೆಯ ಕುಟುಂಬದವರು ಮದುವೆಯ ಸ್ಥಳದಲ್ಲಿ ಕಾಯುತ್ತಿದ್ದರು, ಆದರೆ ವರನಿಗೆ ಎಚ್ಚರವಾಗದೇ ಮದುವೆಗೆ ಬಂದೇ ಇಲ್ಲ. ಮರುದಿನ ಅವನಿಗೆ ಪ್ರಜ್ಞೆ ಬಂದಿದೆ. ಕೂಡಲೇ ವಧುವಿನ ಮನೆಗೆ ಹೋಗಿದ್ದಾನೆ. ಆದರೆ ಅದು ತುಂಬಾ ತಡವಾಗಿತ್ತು.
ಮದುವೆಯನ್ನೇ ಮರೆಯುವಷ್ಟು ಕುಡಿಯುವ ವ್ಯಕ್ತಿಯೊಂದಿಗೆ ಯಾರು ತಾನೇ ತಮ್ಮ ಜೀವನ ನಡೆಸಲು ಬಯಸುತ್ತಾರೆ? ವಧು ಅವನನ್ನು ಮದುವೆಯಾಗಲು ನಿರಾಕರಿಸಿದಳು.
ವಧುವಿನ ಕುಟುಂಬದವರು ಮದುವೆಯ ವ್ಯವಸ್ಥೆಗಳಿಗೆ ಖರ್ಚು ಮಾಡಿದ ಎಲ್ಲಾ ಹಣವನ್ನು ಹಿಂದಿರುಗಿಸುವಂತೆ ವರನ ಕುಟುಂಬಕ್ಕೆ ಒತ್ತಾಯಿಸಿದ್ದಾರೆ. ಹಣ ಕೊಡದ ಕಾರಣ ವರನ ಕೆಲವು ಸಂಬಂಧಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ.
ನಂತರ, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಸರಿಪಡಿಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ ಎಂದು ಹೇಳಲಾಗಿದೆ.