ಪಾಟ್ನಾ: ಹದಿನೈದು ದಿನಗಳಲ್ಲಿ 10 ಸೇತುವೆಗಳು ಕುಸಿದ ನಂತರ ಬಿಹಾರ ಕ್ರಮಕೈಗೊಂಡಿದ್ದು, ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ 15 ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಅಮಾನತುಗೊಂಡವರಲ್ಲಿ ಜಲಸಂಪನ್ಮೂಲ ಇಲಾಖೆಯ 11 ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಯ 4 ಮಂದಿ ಸೇರಿದ್ದಾರೆ. ಈ ಸಂಬಂಧ ಇಬ್ಬರು ಇಂಜಿನಿಯರ್‌ಗಳಿಂದ ವಿವರಣೆಯನ್ನೂ ಸರ್ಕಾರ ಕೇಳಿದೆ.
ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂಬತ್ತು ಸೇತುವೆಗಳು ಮತ್ತು ಮೋರಿಗಳು ಕುಸಿದಿವೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಈ ಪೈಕಿ ಆರು ಹಳೆಯದಾಗಿದ್ದು, ಮೂರು ನಿರ್ಮಾಣ ಹಂತದಲ್ಲಿವೆ. ಈ ನದಿಯ ಮೇಲಿರುವ ಸೇತುವೆಗಳು ಮತ್ತು ಮೋರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಎಂಜಿನಿಯರ್‌ಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಇಲಾಖಾ ಫ್ಲೈಯಿಂಗ್ ಸ್ಕ್ವಾಡ್‌ನ ತನಿಖೆಯಿಂದ ತಿಳಿದುಬಂದಿದೆ. ಸರಿಯಾದ ತಾಂತ್ರಿಕ ಮೇಲ್ವಿಚಾರಣೆ ನಡೆಸುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ತ್ವರಿತ ಗತಿಯಲ್ಲಿ ಹೊಸದಾಗಿ ಸೇತುವೆ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಹೊಸ ಸೇತುವೆಗಳ ನಿರ್ಮಾಣ ಕಾಮಗಾರಿ ವೆಚ್ಚವನ್ನು ಗುತ್ತಿಗೆ ಪಡೆದಿದ್ದ ಕಂಪನಿಗಳೇ ಭರಿಸುವಂತೆ ತಿಳಿಸಲಾಗಿದೆ.