ಜೆಹಾನಾಬಾದ್: ಬಿಹಾರದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ಕೂಲಿಗಳು ಮಾಡುವಂತೆ ಕೆಲಸ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕಾರ್ಮಿಕ ವಿರೋಧಿ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದ್ದು, ಮಕ್ಕಳು ಮರ ಕಡಿಯುವುದು, ಕಲ್ಲುಗಳನ್ನು ಕತ್ತರಿಸುವುದು ಮತ್ತು ನೆಲ ಅಗೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ಬಿಹಾರದ ಜೆಹಾನಾಬಾದ್ನ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳನ್ನು ಇಟ್ಟಿಗೆಗಳನ್ನು ಕೀಳುವುದು ಮತ್ತು ಮರಗಳನ್ನು ಕಡಿಯುವುದು ಮುಂತಾದ ಕೂಲಿ ಕೆಲಸಗಳನ್ನು ಮಾಡಿಸಿದ ಘಟನೆ ವರದಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಜೆಹಾನಾಬಾದ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಚಿ ಪಾಂಡೆ, ಈ ವಿಷಯ ತಮ್ಮ ಅರಿವಿಗೆ ಬಂದಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಶಾಲೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ.
“ನಾವು ವಿಡಿಯೋವನ್ನು ಗಮನಿಸಿದ್ದೇವೆ. ಬಳಿಕ ಕಾಕೋ ಬ್ಲಾಕ್ನ ಇಸ್ಲಾಂಪುರ ಪಂಚಾಯತ್ನಲ್ಲಿರುವ ಶಾಲೆಗೆ ಭೇಟಿ ನೀಡಿದ್ದೇವೆ. ಶಾಲೆಯಲ್ಲಿ ನಿರ್ವಹಣೆ ತೀರಾ ಕಳಪೆಯಾಗಿದೆ ಮತ್ತು ಹಾಜರಾತಿ ಕೂಡ ತುಂಬಾ ಕಡಿಮೆಯಾಗಿದೆ” ಎಂದು ಡಿಎಂ ತಿಳಿಸಿದ್ದಾರೆ.