ಕೇಂದ್ರ ಸರ್ಕಾರದ ವಿರೋಧದ ನಡುವೆಯೂ ಸೋಮವಾರದಂದು ಜಾತಿ ಗಣತಿ ವರದಿ ಬಿಡುಗಡೆ ಮಾಡಿರುವ ಬಿಹಾರ ಸರ್ಕಾರ, ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಬಿಹಾರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಜನರಿಗೆ (EWS) ನ್ಯಾಯಾಂಗ ಸೇವೆ ವ್ಯವಸ್ಥೆಯಲ್ಲಿ ಶೇಕಡ 10ರಷ್ಟು ಮೀಸಲು ಕಲ್ಪಿಸುವ ನಿರ್ಣಯ ಕೈಗೊಂಡಿದೆ.
ಮಂಗಳವಾರದಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ನ್ಯಾಯಾಂಗ ಸೇವೆ, ಕಾನೂನು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೇಕಡ 10 ರಷ್ಟು ಮೀಸಲು ಕಲ್ಪಿಸಲು ಅನುಮೋದನೆ ನೀಡಲಾಗಿದೆ. ಇದನ್ನು ಅನುಷ್ಠಾನಕ್ಕೆ ತರುವ ಸಲುವಾಗಿ ‘ರಾಜ್ಯ ನ್ಯಾಯಾಂಗ ಸೇವೆ 1951’ ರ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿಸಲಾಗಿದೆ.
ಬಿಹಾರ ಸರ್ಕಾರ, ಸೋಮವಾರ ಜಾತಿ ಆಧಾರಿತ ಜನಗಣತಿ ವರದಿಯನ್ನು ಬಿಡುಗಡೆ ಮಾಡಿದ ಬಳಿಕ ರಾಜ್ಯದಲ್ಲಿ ಶೇಕಡ 63.1ರಷ್ಟು ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗದ ಜನರಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ವರದಿ ಅನುಸಾರ ಅತ್ಯಂತ ಹಿಂದುಳಿದ ವರ್ಗ ಶೇ.36, ಇತರ ಹಿಂದುಳಿದ ವರ್ಗ ಶೇ.27, ಸಾಮಾನ್ಯ ವರ್ಗ ಶೇ.15.52, ಯಾದವ ಶೇ.14.27, ಪರಿಶಿಷ್ಟ ಜಾತಿ ಶೇ.19.7, ಭೂಮಿಹಾರ್ ವರ್ಗ ಶೇ.2.86, ಬ್ರಾಹ್ಮಣ ಶೇ.3.66, ಕುರ್ಮಿ ಶೇ.2.87, ಮುಸಹಾರ್ ಶೇ.3, ಪರಿಶಿಷ್ಟ ಪಂಗಡ ಶೇ.1.7 ಇರುವ ಸಂಗತಿ ತಿಳಿದು ಬಂದಿತ್ತು.
ಇನ್ನು ಈ ವರದಿಯ ಅನುಸಾರ ಧರ್ಮಾಧಾರಿತ ಅಂಕಿ ಸಂಖ್ಯೆಯನ್ನು ನೋಡುವುದಾದರೆ ಹಿಂದೂ ಶೇ.81.99, ಮುಸ್ಲಿಂ ಶೇ.17.70, ಕ್ರೈಸ್ತ ಶೇ.0.05, ಬೌದ್ಧ ಶೇ.0.08, ಸಿಖ್ ಶೇ.0.01, ಜೈನ ಶೇ.0.009 ಹಾಗೂ ಇತರೆ ಧರ್ಮದ ಶೇ.0.12 ಜನಸಂಖ್ಯೆ ಇರುವುದು ಬಹಿರಂಗವಾಗಿದೆ.