ಮುಜಫರ್ ಪುರ್: ಬಿಹಾರದ ರೈತರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಮುಜಫರ್‌ಪುರ ಜಿಲ್ಲೆ ಸಿಂಗಾರಿ ಗ್ರಾಮದ ರೈತ ರಾಮ್ ಬಹದ್ದೂರ್ ಶಾ ಎಂಬುವವರ ಖಾತೆಗೆ 51 ಕೋಟಿ ರೂ. ಹಣ ಜಮೆಯಾಗಿದೆ.
ಹಿರಿಯ ನಾಗರಿಕರಿಗೆ ನೀಡುವ ಪಿಂಚಣಿ ಜಮೆಯಾಗಿರುವ ಕುರಿತು ಮಾಹಿತಿ ಪಡೆಯಲು ಶಾ ಅವರು ಬ್ಯಾಂಕ್‌ಗೆ ತೆರಳಿದ್ದರು. ಈ ವೇಳೆ 51 ಕೋಟಿ ರೂ. ಜಮೆಯಾಗಿರುವ ಸುದ್ದಿ ತಿಳಿದು ರೈತ ಅವಕ್ಕಾಗಿದ್ದಾರೆ. ಈ ಸುದ್ದಿಯು ಶೀಘ್ರ ಕಾಡ್ಗಿಚ್ಚಿನಂತೆ ಅಕ್ಕ-ಪಕ್ಕದ ಗ್ರಾಮಗಳ ಜನರಿಗೆ ತಲುಪಿದ್ದು, ಎಲ್ಲರೂ ಅಚ್ಚರಿಗೊಂಡಿದ್ದಾರೆ.
“ನಾವು ಜೀವನ ನಡೆಸಲು ಕೃಷಿಯನ್ನೇ ಅವಲಂಬಿಸುತ್ತಿರುವ ಬಡ ರೈತರಾಗಿದ್ದೇವೆ. ಹಣ ಹೇಗೆ ಬಂತು ಎಂಬುದು ನಮಗೆ ತಿಳಿದಿಲ್ಲ. ತನಗೆ ಬಂದಿರುವ ಹಣದಲ್ಲಿ ಸ್ವಲ್ಪವಾದರೂ ಉಳಿಸಿ, ನಮಗೆ ಹಣಕಾಸು ನೆರವು ನೀಡಿದರೆ ಸುಗಮವಾಗಿ ಜೀವನ ಸಾಗಿಸಬಹುದಾಗಿದೆ” ಎಂದು ರೈತ ರಾಮ್ ಬಹದ್ದೂರ್ ಶಾ ತಿಳಿಸಿದ್ದಾರೆ.
ಲಸಿಕೆ ಮೈತ್ರಿ ಯೋಜನೆ: ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ
“ಹಿರಿಯ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ 52 ಕೋಟಿ ರೂ.ಗಳು ಜಮೆ ಆಗಿದೆ ಎಂಬ ವಿಷಯ ಗೊತ್ತಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಬ್ಯಾಂಕ್‌ಗೆ ಸೂಚನೆ ನೀಡಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕತ್ರಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕೆಲವರ ಬ್ಯಾಂಕ್ ಅಕೌಂಟ್ ಗೆ ಕೋಟಿ-ಕೋಟಿ ರೂ. ಹಣ ಜಮೆ ಆಗಿದೆ. ತಾಂತ್ರಿಕ ದೋಷದಿಂದ ಈ ರೀತಿ ಸಂಭವಿಸುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದು, ಹಣದ ಮೊತ್ತ ಮಾತ್ರ ಕಾಣಿಸುತ್ತದೆ. ನಿಜಕ್ಕೂ ಅಷ್ಟೊಂದು ಮೊತ್ತದ ಹಣ ಜಮೆ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.