ಕೋವಿಡ್-19 ಸಾಂಕ್ರಮಿದ ಕಾರಣದ ಅರೇಂಜ್ ಮದುವೆಗಳ ಆಯೋಜನೆಗೆ ಹೊಸ ಆಯಾಮವೇ ಬಂದುಬಿಟ್ಟಿದ್ದು, ಅದೆಷ್ಟೇ ಸಿರಿವಂತರಾದರೂ ಬರೀ ಕುಟುಂಬಸ್ಥರು ಮಾತ್ರವೇ ಹಾಜರಿದ್ದು ಮದುವೆ ಮಾಡಿಕೊಳ್ಳಬೇಕಾಗಿ ಬಂದಿದೆ.
ಆದರೆ ಪ್ರೇಮವಿವಾಹಗಳಿಗೆ ಸಾಂಕ್ರಮಿಕ ಒಂದು ರೀತಿಯಲ್ಲಿ ಸಹಾಯವನ್ನೇ ಮಾಡುತ್ತಿದೆ ಎನ್ನಬಹುದು.
ಬಿಹಾರದ ಕೈಮುರ್ ಜಿಲ್ಲೆಯ ಜೋಡಿಯೊಂದು ತಮ್ಮ ಪ್ರೇಮವಿವಾಹಕ್ಕೆ ಹೆತ್ತವರು ಅಡ್ಡಿಪಡಿಸಿದ ಕಾರಣ ಪೊಲೀಸರ ನೆರವಿನಿಂದ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ. ಈ ಜೋಡಿ ಪೊಲೀಸ್ ಠಾಣೆಯಲ್ಲೇ ಮೂರು ಗಂಟು ಹಾಕಿಕೊಂಡು ಸಪ್ತಪದಿಯ ಶಪಥಗೈದಿದ್ದಾರೆ.
ತಮ್ಮಿಬ್ಬರ ಕುಟುಂಬಗಳ ನಡುವೆ ಈ ಮದುವೆಗೆ ಒಮ್ಮತ ಮೂಡದೇ ಇದ್ದ ಕಾರಣ ಪೊಲೀಸರ ನೆರವು ಯಾಚಿಸಿದ ಈ ಜೋಡಿಯ ನೆರವಿಗೆ ಬಂದ ಪೊಲೀಸರು ಮೊದಲಿಗೆ ಇಬ್ಬರ ಬಂಧುಗಳಿಗೂ ಮದುವೆಗೆ ಒಪ್ಪಿಕೊಳ್ಳುವಂತೆ ಮನವೊಲಿಸಲು ನೋಡಿದ್ದಾರೆ. ಇದಾದ ಬಳಿಕ ಪೊಲೀಸ್ ಠಾಣೆಯ ಆವರಣದಲ್ಲೇ ಇದ್ದ ದೇವಸ್ಥಾನವೊಂದರ ಮುಂದೆ ಮದುವೆ ಈ ಜೋಡಿಗೆ ಮದುವೆ ಮಾಡಿಸಿದ್ದಾರೆ ಪೊಲೀಸರು.
ಪೊಲೀಸರ ಮಧ್ಯ ಪ್ರವೇಶದ ಬಳಿಕ ಈ ಮದುವೆಗೆ ಹುಡುಗ ಹಾಗೂ ಹುಡುಗಿ ಕಡೆಯವರು ಒಪ್ಪಿಕೊಂಡಿದ್ದಾರೆ. ಮದುಮಗಳನ್ನು ಸ್ನೇಹಕುಮಾರಿ ಹಾಗೂ ಮದುಮಗನನ್ನು ಶುಭಂ ಕುಮಾರ್ ಎಂದು ಗುರುತಿಸಲಾಗಿದೆ.