ಇತ್ತೀಚೆಗಷ್ಟೇ ಆರ್ ಜೆಡಿ ಜೊತೆಗಿನ ಮೈತ್ರಿ ತೊರೆದು ಬಿಜೆಪಿ ಸೇರಿದ ಎರಡು ವಾರಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ, ಫೆಬ್ರವರಿ 12 ರಂದು ರಾಜ್ಯ ಅಸೆಂಬ್ಲಿಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಒಂಬತ್ತನೇ ಭಾರಿ ಸಿಎಂ ಆಗಿರುವ ನಿತೀಶ್ ಗೆ ಇದು ಸುಲಭದ ಅಗ್ನಿಪರೀಕ್ಷೆಯಾಗಲಿದೆ.
ಬಿಜೆಪಿವಿರೋಧಿ ಇಂಡಿಯಾ ಮೈತ್ರಿಕೂಟಕ್ಕೆ ಕೈಕೊಟ್ಟು ಎನ್ಡಿಎ ಪಾಳೆಯ ಸೇರಿರುವ ಜೆಡಿಯು ನಾಯಕ ನಿತೀಶ್ ಕುಮಾರ್ಗೆ 128 ಶಾಸಕರಬೆಂಬಲವಿದೆ. ಅದರಲ್ಲಿ ಬಿಜೆಪಿ 78, ಜೆಡಿಯು 45, ಎಚ್ಎಎಂ 4 ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಿದ್ದಾರೆ. ವಿಪಕ್ಷಗಳ ಬಳಿ 114 ಶಾಸಕರಿದ್ದಾರೆ. ಬಹುಮತ ಸಾಬೀತುಪಡಿಸಲು 122 ಶಾಸಕರು ಬೇಕು.
ವಿಶ್ವಾಸಮತ ಯಾಚನೆಯ ಹಿನ್ನೆಲೆಯಲ್ಲಿ ಜೆಡಿಯು ತನ್ನ ಶಾಸಕರಿಗೆ ವಿಪ್ ನೀಡಿದ್ದು, ಸೋಮವಾರ ಎಲ್ಲರೂ ವಿಧಾನಸಭೆಯಲ್ಲಿ ಹಾಜರಿರಲು ಸೂಚಿಸಿದೆ. ವಿಶ್ವಾಸಮತ ಯಾಚನೆಗೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಎನ್ಡಿಎ ಮೈತ್ರಿ ಕೂಟವು ಸೆಳೆಯುವ ಆತಂಕ ಮನೆ ಮಾಡಿದ್ದು, ಆರ್ಜೆಡಿಯ ಎಲ್ಲಾ ಶಾಸಕರನ್ನೂ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿಯಾದವ್ ಅವರ ಮನೆಯಲ್ಲಿ ಇರಿಸಲಾಗಿದೆ.
ಆರ್ಜೆಡಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) ಲಿಬರೇಶನ್ನ ಶಾಸಕರು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಮನೆಯಲ್ಲಿ ಜಮಾಯಿಸಿದ್ದಾರೆ. ಇವರ ಮನೆಯಲ್ಲಿದ್ದ ಕಾಂಗ್ರೆಸ್ ಶಾಸಕರು ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಎಸ್ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ತೇಜಸ್ವಿ ಯಾದವ್ ಅವರ ಮನೆಗೆ ಆಗಮಿಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದಾರೆ.