ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ನಡೆಸಿದ 11 ಮಂದಿಯನ್ನು ಬಂಧಿಸಲಾಗಿದೆ.
ಪಾಟ್ನಾ ಜಿಲ್ಲೆಯ ಗೌರಿಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹ್ಗಿ ಮೋರ್ ಬಳಿ ಭಾನುವಾರ ಸಂಜೆ ಕಲ್ಲು ತೂರಾಟ ನಡೆದಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ವಾಹನದ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ.
ಸೋಮವಾರ ಗಯಾಗೆ ಸಿಎಂ ತೆರಳುತ್ತಿದ್ದು, ಇದರ ಅಂಗವಾಗಿ ಬೆಂಗಾವಲು ವಾಹನಗಳು ಹೊರಟಿದ್ದವು. ದಾಳಿ ನಡೆದ ವೇಳೆ ನಿತೀಶ್ ಕುಮಾರ್ ಇರಲಿಲ್ಲ. ಸೋಗಿ ಮೋರ್ ಬಳಿ ಸಂಜೆ 5 ಗಂಟೆ ಸುಮಾರಿಗೆ ಸಿಎಂ ಕಾನ್ವೆಯ ನಾಲ್ಕು ವಾಹನಗಳ ಮೇಲೆ ವಿರೋಧಿಗಳು ದಾಳಿ ನಡೆಸಿದ್ದಾರೆ ಎಂದು ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.
ಕಲ್ಲು ತೂರಾಟ ಮತ್ತು ಸಿಎಂ ಪಡೆ ವಾಹನಗಳಿಗೆ ಹಾನಿ ಮಾಡಿದ ಆರೋಪದ ಮೇಲೆ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಹಲವರನ್ನು ಗುರುತಿಸಿದ್ದು, ಅವರನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.