ಪಾಟ್ನಾ: ವಿದೇಶದಿಂದ ದೂರವಾಣಿ ಮೂಲಕ ತಮಗೆ ಜೀವ ಬೆದರಿಕೆ ಕರೆ ಬಂದಿರುವುದಾಗಿ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಹರಿಭೂಷಣ್ ಠಾಕೂರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ, ರಾಜ್ಯದಲ್ಲಿ ತೆರೆದ ಸ್ಥಳದಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು. ಇದೇ ಕೊಲೆ ಬೆದರಿಕೆಗೆ ಕಾರಣ ಎಂದು ಶಂಕಿಸಿದ್ದಾರೆ.
ಬುಧವಾರ ಸಂಜೆ 7:07ಕ್ಕೆ ತಮ್ಮ ಮೊಬೈಲ್ಗೆ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಅನಾಮಧೇಯ ಕರೆ ಬಂದಿದ್ದು, ಕೊಲೆ ಬೆದರಿಕೆ ಹಾಕಿರುವುದಾಗಿ ಬಿಜೆಪಿ ಶಾಸಕರು ತಿಳಿಸಿದ್ದಾರೆ.
ಬಹಿರಂಗ ನಮಾಜ್ ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಆಗ್ರಹಿಸುವುದು ಮತ್ತು ವಂದೇ ಮಾತರಂ ಹಾಡದವರನ್ನು ವಿರೋಧಿಸುವುದು ಮುಂತಾದ ವಿಷಯಗಳನ್ನು ಶಾಸಕರು ಈ ಹಿಂದೆ ಪ್ರಸ್ತಾಪಿಸಿದ್ದರು. ಬಹುಶಃ ಅದಕ್ಕಾಗಿಯೇ ಕೊಲೆ ಬೆದರಿಕೆ ಕರೆ ಬಂದಿರಬಹುದು ಎಂದು ಹರಿಭೂಷಣ್ ಠಾಕೂರ್ ಹೇಳಿದ್ದಾರೆ.
ಆದರೆ, ತಾನು ಇಂಥ ಬೆದರಿಕೆಗೆಲ್ಲ ಹೆದರುವುದಿಲ್ಲ. ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ. ತಾನು ದೇಶದ ಹಿತಾಸಕ್ತಿಯ ಬಗ್ಗೆ ಮಾತನಾಡುತ್ತಿರುವುದಾಗಿ ಹರಿಭೂಷಣ್ ಠಾಕೂರ್ ತಿಳಿಸಿದ್ದಾರೆ.
ಶೀಘ್ರದಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಬೆದರಿಕೆಯ ಕುರಿತು ಮಾಹಿತಿ ನೀಡುವುದಾಗಿ ಠಾಕೂರ್ ಹೇಳಿದ್ದಾರೆ. ಅಲ್ಲದೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.