ಬಿಹಾರದ ರಾಜಧಾನಿ ಪಾಟ್ನಾದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಬೇಯಿಸಲು ಬೆಂಚುಗಳನ್ನು ಸುಟ್ಟು ಹಾಕಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಶಿಕ್ಷಣ ಇಲಾಖೆಯು ತನಿಖೆಗೆ ಆದೇಶಿಸಿದೆ.
ಪಾಟ್ನಾ ಜಿಲ್ಲೆಯ ಬಿಹ್ತಾ ಬ್ಲಾಕ್ ನಲ್ಲಿರುವ ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ. ಅಡುಗೆಯವರು ವಿದ್ಯಾರ್ಥಿಗಳಿಗೆ ಊಟ ಸಿದ್ಧಪಡಿಸಲು ಮಾಡಲು ಶಾಲೆಯ ಬೆಂಚುಗಳನ್ನು ಸುಡುತ್ತಿರುವುದನ್ನು ಕಾಣಬಹುದು.
ಅಡುಗೆ ಮಾಡಲು ಉರುವಲು ಇರಲಿಲ್ಲ ಎಂದು ಅಡುಗೆ ಮಾಡುವವರು ಹೇಳಿದ್ದಾರೆ. ಸವಿತಾ ಕುಮಾರಿ ಎಂಬ ಶಿಕ್ಷಕಿ ಬೆಂಚುಗಳನ್ನು ಬಳಸಲು ಹೇಳಿದ್ದರು ಎಂದು ತಿಳಿಸಿದ್ದು, ಈ ವಿಡಿಯೋವನ್ನು ಸ್ವತಃ ಶಿಕ್ಷಕಿಯೇ ಚಿತ್ರೀಕರಿಸಿದ್ದಾರೆ. ನಂತರ ವೈರಲ್ ಆಗಿದೆ ಎಂದು ಅಡುಗೆಯವರು ಹೇಳಿದ್ದಾರೆ.
ಆದರೆ, ಸವಿತಾ ಕುಮಾರಿ ಆರೋಪವನ್ನು ತಳ್ಳಿಹಾಕಿದ್ದು, ಅಡುಗೆಯವರು ತನ್ನ ಮೇಳೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಶಾಲೆಯ ಪ್ರಾಂಶುಪಾಲರನ್ನು ದೂಷಿಸಿದ ಅವರು ಬೆಂಚುಗಳನ್ನು ಸುಡಲು ಆದೇಶಿಸಿದ್ದರು ಎಂದು ಆರೋಪಿಸಿದ್ದಾರೆ.
ಆರೋಪವನ್ನು ತಳ್ಳಿಹಾಕಿದ ಪ್ರಾಂಶುಪಾಲ ಪ್ರವೀಣ್ ಕುಮಾರ್ ರಂಜನ್, ಶಿಕ್ಷಣ ಇಲಾಖೆಯ ಆದೇಶದ ಮೇರೆಗೆ ನಾವು ಮಧ್ಯಾಹ್ನದ ಊಟ ಮಾಡಲು ಅಡುಗೆ ಅನಿಲ ಬಳಸುತ್ತೇವೆ. ಹೇಳಿದ ದಿನ ಹೊರಗೆ ಚಳಿ ಇದ್ದುದರಿಂದ ಅಡುಗೆಯವರು ಬೆಂಚುಗಳನ್ನು ಉರುವಲಾಗಿ ಬಳಸುತ್ತಿದ್ದರು ಎಂದು ಹೇಳಿದ್ದಾರೆ.
ಘಟನೆಯನ್ನು ಗಮನಿಸಿದ ಬ್ಲಾಕ್ ಶಿಕ್ಷಣಾಧಿಕಾರಿ ನಿವೇಶ್ ಕುಮಾರ್, ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.