ಗೋಪಾಲ್‌ಗಂಜ್: ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ವೀಕ್ಷಿಸುತ್ತಿದ್ದಾಗ ವರನ ಕಾರ್ ಡಿಕ್ಕಿ ಹೊಡೆದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಜಿಲ್ಲೆಯ ಸಂಬಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಖಿಂಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬುಲೆಟ್ ಕುಮಾರ್ ಕುಶ್ವಾಹ ಎಂಬ ಪ್ರತ್ಯಕ್ಷದರ್ಶಿ ಮಾತನಾಡಿ, ನಮ್ಮ ಗ್ರಾಮದ ಸಲೀಂ ಮಿಯಾ ಕುಟುಂಬಕ್ಕೆ ಬಹ್ತ್ವಾ ಗ್ರಾಮದಿಂದ ಮದುವೆ ಮೆರವಣಿಗೆ ಬಂದಿದೆ. ಐದರಿಂದ ಆರು ಮಹಿಳೆಯರು ಮಂಚದ ಮೇಲೆ ಕುಳಿತಿದ್ದರು ಮತ್ತು ವರನ ಕಾರ್ ಅವರ ಮುಂದೆ ನಿಂತಿತ್ತು. ಕಾರ್ ಚಾಲಕ ಕೂಡ ಕುಳಿತಿದ್ದ. ಅವರು ಥಟ್ಟನೆ ವಾಹನವನ್ನು ಸ್ಟಾರ್ಟ್ ಮಾಡಿದಾಗ ಅವರೆಲ್ಲರ ಮೇಲೆ ನುಗ್ಗಿದೆ.
ಎಲ್ಲರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಮೂವರನ್ನು ಗೋರಖ್‌ಪುರಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ರಮಾವತಿ ದೇವಿ (70) ಮತ್ತು ಲಲಿತಾ ದೇವಿ (60) ಎಂದು ಗುರುತಿಸಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಸಂಜಯ್ ರೈ ಮಾತನಾಡಿ, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.