
ದೇಸ್ರೀ ಪೊಲೀಸ್ ಠಾಣಾ ವ್ಯಾಪ್ತಿಯ ನಯಗಾಂವ್ ಟೋಲಾ ಗ್ರಾಮದಲ್ಲಿ ರಾತ್ರಿ 9:00 ಸುಮಾರಿಗೆ ಹಾಜಿಪುರ -ಮಹಾನಾರ್ ರಾಜ್ಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಹೆದ್ದಾರಿಯ ಪಕ್ಕದಲ್ಲಿ ಇದ್ದ ದೇವಾಲಯದಲ್ಲಿ ಭಕ್ತರು ಪೂಜಾ ಕಾರ್ಯದಲ್ಲಿ ತೊಡಗಿದ್ದರು.
ಈ ವೇಳೆ ವೇಗವಾಗಿ ಬಂದ ಟ್ರಕ್ ಭಕ್ತರ ಗುಂಪಿನ ಮಧ್ಯೆ ನುಗ್ಗಿದ್ದು, ಇದರ ಪರಿಣಾಮ 9 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ವೈಶಾಲಿಯಲ್ಲಿ ನಡೆದ ಅಪಘಾತ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸಾವಿಗೀಡಾದವರಿಗೆ ಸಂತಾಪ ಸೂಚಿಸಿ ಮೃತರ ಕುಟುಂಬದ ಸಮೀಪದ ಬಂಧುಗಳಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.