
ಕಲಬುರಗಿ : ರಾಜ್ಯದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು 6 ತಿಂಗಳೊಳಗೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.
ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಪ್ರಗತಿ ವಿವರಿಸುತ್ತಾ, ಪ್ರಸ್ತುತ ಕಲಬುರಗಿ ವೃತ್ತದ ಕಲಬುರಗಿ, ಬೀದರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ 583 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 398 ಭರ್ತಿಯಾಗಿವೆ. ಉಳಿದಂತೆ 185 ಹುದ್ದೆಗಳು ಖಾಲಿ ಇವೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಖಾಲಿ ಹುದ್ದೆಗಳ ಮಾಹಿತಿ ನೀಡಿದಲ್ಲಿ ಮುಂದಿನ 6 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಅಲ್ಲಿಯ ವರೆಗೆ ಗುತ್ತಿಗೆ ಮೇಲೆ ಸಿಬ್ಬಂದಿಗಳ ಸೇವೆ ಪಡೆಯಿರಿ ಎಂದು ಸಲಹೆ ನೀಡಿದರು.
ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಮತ್ತು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಸಸಿಗಳ ಕಥೆ ಏನು? ಅವುಗಳ ಸಂರಕ್ಷಣೆ ಆಗುತ್ತಿವೆ, ಅವು ಬದುಕಿದಾವ, ಅವುಗಳ ಮೇಲೆ ಇಲಾಖೆ ನಿಗಾವಹಿಸಿದೆಯೇ? ಎಂದ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಕಳೆದ 5 ವರ್ಷಗಳಲ್ಲಿ ನೆಡಲಾದ ಸಸಿಗಳ ಇಂದಿನ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸಬೇಕೆಂದರು. ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸಸಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.