alex Certify BIGG NEWS : ತಾಲೂಕಿಗೊಂದು `ಟ್ರೀ ಪಾರ್ಕ್’ ಸ್ಥಾಪನೆ : ಸಚಿವ ಈಶ್ವರ್ ಖಂಡ್ರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ತಾಲೂಕಿಗೊಂದು `ಟ್ರೀ ಪಾರ್ಕ್’ ಸ್ಥಾಪನೆ : ಸಚಿವ ಈಶ್ವರ್ ಖಂಡ್ರೆ

ಕಲಬುರಗಿ : ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಪ್ರತಿ ತಾಲೂಕಿಗೊಂದು ಟ್ರೀ ಪಾರ್ಕ್ (ಮರಗಳ ಉದ್ಯಾನವನ) ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಕಲಬುರಗಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸುನೀಲ ಪನ್ವಾರ ಅವರಿಗೆ ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಸೂಚಿಸಿದರು.

ರವಿವಾರ ಕಲಬುರಗಿ ಕಲಬುರಗಿ ಅರಣ್ಯ ವೃತ್ತ ಕಚೇರಿಯಲ್ಲಿ ಕಲಬುರಗಿ, ಬೀದರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇದಕ್ಕೆ ಇಲಾಖೆಯಿಂದಾಗಲಿ ಅಥವಾ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಅನುದಾನ ಒದಗಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮತ್ತು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಮತ್ತು ಸಾರ್ವಜನಿಕರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ನೀಡಲಾಗುವ ಸಸಿಗಳ ಕಥೆ ಏನು? ಅವುಗಳ ಸಂರಕ್ಷಣೆ ಆಗುತ್ತಿವೆ, ಅವು ಬದುಕಿದಾವ, ಅವುಗಳ ಮೇಲೆ ಇಲಾಖೆ ನಿಗಾವಹಿಸಿದೆಯೇ? ಎಂದ ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ಕಳೆದ 5 ವರ್ಷಗಳಲ್ಲಿ ನೆಡಲಾದ ಸಸಿಗಳ ಇಂದಿನ ಸ್ಥಿತಿಗತಿ ಕುರಿತು ಸಮಗ್ರ ವರದಿ ಸಲ್ಲಿಸಬೇಕೆಂದರು. ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಸಸಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿಯಲ್ಲಿ ಶೇ.3 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಈ ಪೈಕಿ ಚಿಂಚೋಳಿಯಲ್ಲಿಯೇ ಹೆಚ್ಚು. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಏನೆಲ್ಲ ಸಾಧ್ಯತೆಗಳಿವೆ ಎಲ್ಲವನ್ನು ಮಾಡಿ. ವಿಶೇಷವಾಗಿ ಕೆರೆ, ಬಾವಿ, ಬ್ರಿಡ್ಜ್-ಕಂ-ಬ್ಯಾರೇಜ್, ಜಿಲ್ಲಾ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ಮುಂದಿನ 15 ದಿನದಲ್ಲಿ ಯುದ್ದೋಪಾದಿಯಲ್ಲಿ ಗಿಡ ನೆಡಬೇಕು. ಚಿಂಚೋಳಿ ತಾಲೂಕಿನ ಗೊಟ್ಟಂಗೊಟ್ಟ ಮತ್ತು ಆಳಂದ ತಾಲೂಕಿನ ಭೂಸನೂರನಲ್ಲಿನ ದೈವಿ ವನ ಅಭಿವೃದ್ಧಿಗೂ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ ಅವರಿಗೆ ಸೂಚಿಸಿದರು.

ಕಲಬುರಗಿ ಮಣ್ಣಿಗೆ ಹೊಂದಿಕೊಳ್ಳುವಂತಹ ಗಿಡಗಳನ್ನು ಹೆಚ್ಚು ಬೆಳೆಸಲು ರೈತರಿಗೆ ಪ್ರೇರೇಪಿಸಬೇಕು. ಈ ಮರಗಳು ವಾಣಿಜ್ಯ ಮರಗಳಾಗಿರಬೇಕು. ಮುಂದೆ ರೈತರಿಗೆ ಲಾಭ ತರುವಂತಿರಬೇಕು. ಇಂತಹ ಯೋಜನೆಗಳು ಹಾಕಿಕೊಂಡಿದಲ್ಲಿ ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಬಹುದಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಸಲಹೆ ನೀಡಿದ ಅರಣ್ಯ ಸಚಿವರು, ಕಲಬುರಗಿ ಜಿಲ್ಲೆಯಲ್ಲಿರುವ 14 ನರ್ಸರಿಗಳು ಮುಂದಿನ ವರ್ಷ 25 ಲಕ್ಷ ಸಸಿಗಳನ್ನು ತಯ್ಯಾರಿಸಬೇಕು ಸೂಚಿಸಿ, ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

5 ಕೋಟಿ ಸಸಿ ನೆಡುವ ಗುರಿ:

ರಾಜ್ಯದಲ್ಲಿ ಕಳೆದ ಜುಲೈ 1 ರಿಂದ ವನಮಹೋತ್ಸವ ಅಂಗವಾಗಿ ಸಸಿ ನೆಡೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಮುಂದಿನ 3 ತಿಂಗಳಲ್ಲಿ ರಾಜ್ಯದಾದ್ಯಂತ 5 ಕೋಟಿ ಸಸಿ ನೆಡೆಯುವ ಗುರಿ ಹೊಂದಲಾಗಿದೆ. ಕಲಬುರಗಿಯಲ್ಲಿ ಕನಿಷ್ಠ 10 ಲಕ್ಷ ಸಸಿ ನೆಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವರು,  ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಗುರಿ ಮೀರಿ ಸಾಧನೆ ಮಾಡುವಂತೆ ಡಿ.ಎಫ್.ಓ. ಗಳಿಗೆ ನಿರ್ದೇಶನ ನೀಡಿದರು.

6 ತಿಂಗಳಲ್ಲಿ ಹುದ್ದೆಗಳ ಭರ್ತಿಗೆ ಕ್ರಮ:

ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಪ್ರಗತಿ ವಿವರಿಸುತ್ತಾ, ಪ್ರಸ್ತುತ ಕಲಬುರಗಿ ವೃತ್ತದ ಕಲಬುರಗಿ, ಬೀದರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿಗೆ 583 ಹುದ್ದೆ ಮಂಜೂರಾಗಿದ್ದು, ಇದರಲ್ಲಿ 398 ಭರ್ತಿಯಾಗಿವೆ. ಉಳಿದಂತೆ 185 ಹುದ್ದೆಗಳು ಖಾಲಿ ಇವೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆಸಿದ ಸಚಿವ ಈಶ್ವರ ಬಿ. ಖಂಡ್ರೆ ಅವರು, ಖಾಲಿ ಹುದ್ದೆಗಳ ಮಾಹಿತಿ ನೀಡಿದಲ್ಲಿ ಮುಂದಿನ 6 ತಿಂಗಳಲ್ಲಿ ಭರ್ತಿ ಮಾಡಲಾಗುವುದು. ಅಲ್ಲಿಯ ವರೆಗೆ ಗುತ್ತಿಗೆ ಮೇಲೆ ಸಿಬ್ಬಂದಿಗಳ ಸೇವೆ ಪಡೆಯಿರಿ ಎಂದು ಸಲಹೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...