ಬೆಂಗಳೂರು : ಅಬ್ಬಾ ಕೊರೊನಾ ಹೋಯ್ತು..! ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಕೊರೊನಾ ಮಹಾಮಾರಿ ಆತಂಕ ಶುರುವಾಗಿದೆ.ಹೌದು, ನೆರೆ ರಾಜ್ಯ ಕೇರಳದಲ್ಲಿ ಹೊಸ ರೂಪಾಂತರ ಜೆಎನ್ 1 ಕಂಡು ಬಂದಿದ್ದು, ಆತಂಕ ಮನೆ ಮಾಡಿದೆ .
ಕೇರಳದಲ್ಲಿ ‘ಕೋವಿಡ್’ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಕರ್ನಾಟಕದಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆ ತಜ್ಞರ ಜೊತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಸಂಜೆ ಮಹತ್ವದ ಸಭೆ ನಡೆಸಲಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ‘ ಕೋವಿಡ್ ಬಗ್ಗೆ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.ಕೋವಿಡ್ ಕೇಸ್ ಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಎಷ್ಟಿದೆ ಅಂತ ನೋಡಲಾಗುತ್ತಿದೆ. ಕೋವಿಡ್ ಕೇಸ್ ಗಳು ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂದು ನೋಡಲಾಗುತ್ತಿದೆ. ಚಳಿಗಾಲದಂತಹ ಹವಾಮಾನದಲ್ಲಿ ಇಂತಹ ಲಕ್ಷಣಗಳು ಹೆಚ್ಚಿರುವುದರಿಂದ ಅದರ ಕುರಿತಂತೆ ಸೂಕ್ತವಾದಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಸಿಂಗಾಪೂರ್ ಸೇರಿದಂತೆ ವಿದೇಶಗಳಲ್ಲಿ ಕೋವಿಡ್ ಹೆಚ್ಚಾಗಿದ್ದು, ವಿದೇಶಗಳಿಗೆ ಪ್ರಯಾಣಿಸುವ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಿ ಎಂದು ಸಚಿವಾಲಯ ತಿಳಿಸಿದ್ದು ವಿಮಾನ ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು, ಪ್ರಯಾಣ ವಿಮೆಯನ್ನು ಖರೀದಿಸುವುದು ಹಾಗೂ ಕಳಪೆ ವಾತಾವರಣಕ್ಕೆ ಪ್ರಯಾಣಿಸುವುದನ್ನು ತಪ್ಪಿಸುವುದು ಮೊದಲಾದ ಸಂಬಂಧಿತ ಪ್ರಯಾಣ ಎಚ್ಚರಿಕೆಗಳನ್ನು ಕೈಗೊಳ್ಳಿ ಎಂದು ಸೂಚಿಸಲಾಗಿದೆ.