ಧಾರವಾಡ : ದೋಷಯುಕ್ತ ವಾಷಿಂಗ್ ಮಷೀನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ಗ್ರಾಹಕರ ಆಯೋಗ ರೂ.28,500 ರೂ.ಗಳ ದಂಡ ಮತ್ತು ಪರಿಹಾರ ನೀಡುವಂತೆ ಆದೇಶಿಸಿದೆ.
ಧಾರವಾಡ ಸಪ್ತಾಪುರದ ವಾಸಿ ಗಿರೀಶ ಜೋಶಿ ಎನ್ನುವವರು ತಮ್ಮ ಮನೆ ಬಳಕೆಗಾಗಿ ಅಮೆಜಾನ್ ವೆಬ್‍ಸೈಟ್‍ನಿಂದ ಅಗಸ್ಟ್ 7, 2020 ರಂದು ರೂ.15,499 ರೂ.ಗಳ ಸಂದಾಯ ಮಾಡಿ ವಾಷೀಂಗ್ ಮಶೀನ್ ಖರೀದಿಸಿದ್ದರು. ಅದರಂತೆ ಎದುರುದಾರ ಕಂಪನಿಯವರು ಆಗಸ್ಟ್ 10,2020 ರಂದು ಸದರಿ ಮಶೀನನ್ನು ದೂರುದಾರನಿಗೆ ವಿತರಿಸಿದ್ದರು. ಆದರೆ ಸದರಿ ಮಷೀನು ಖರೀದಿಸಿದ ಕೆಲವೇ ತಿಂಗಳಲ್ಲಿ ಮಶೀನಿನಲ್ಲಿ ದೋಷ ಉಂಟಾಗಿ ಸಮಸ್ಯೆ ಉಂಟಾಗಿತ್ತು. ದೂರುದಾರ ಆ ವಿಷಯವನ್ನು ಕೂಡಲೇ ಎದುರುದಾರನಿಗೆ ತಿಳಿಸಿದ್ದರು. ಎದುರುದಾರ ಕಂಪನಿಯವರು 3 ತಿಂಗಳ ನಂತರ ಆ ಮಶೀನಿನ ಸಮಸ್ಯೆಯನ್ನು ನಿವಾರಿಸಿದ್ದರು. ಮತ್ತೆ ಜುಲೈ ತಿಂಗಳಲ್ಲಿ ಆ ಮಶೀನಿನಲ್ಲಿ ದೋಷ ಉಂಟಾಗಿ ತೊಂದರೆಯಾಯಿತು. ಈ ಸಂಗತಿಯನ್ನು ಎದುರುದಾರ ಕಂಪನಿಯವರಿಗ ತಿಳಿಸಿದರೂ ಸಕಾಲದಲ್ಲಿ ಅವರು ಬಂದು ವಾಷೀಂಗ್ ಮಷೀನಿನ ದುರಸ್ತಿ ಮಾಡಿರಲಿಲ್ಲ. ಅಂತಹ ಅವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ದೂರುದಾರ ಎದುರುದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ. ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಅವರು ಸದರಿ ವಾಶಿಂಗ್ ಮಷೀನನ್ನು ಖರೀದಿಸಿದ ಒಂದು ವರ್ಷದ ಒಳಗಡೆಯೇ ಅದರಲ್ಲಿ ದೋಷ ಕಂಡುಬಂದಿದ್ದರಿಂದ ಮತ್ತು ಆ ಬಗ್ಗೆ ದೂರಿದರೂ ಇಬ್ಬರೂ ಎದುರುದಾರರು ಅದರ ದೋಷ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದೇ ಸೇವಾ ನ್ಯೂನ್ಯತೆ ಎಸಗಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರ ತನ್ನ ಮನೆ ಬಳಕೆಗಾಗಿ ಆ ವಾಷೀಂಗ್ ಮಷೀನು ಖರೀದಿಸಿದ್ದರು ಅದರಲ್ಲಿ ದೋಷ ಕಂಡುಬಂದಿದ್ದರಿಂದ ದೂರುದಾರ ಗ್ರಾಹಕನಿಗೆ ತೊಂದರೆ ಮತ್ತು ಅನಾನುಕೂಲ ಆಗಿದೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಕಾರಣ ಎದುರುದಾರರು ಕಂಪನಿಯವರು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹೊಸ ವಾಶೀಂಗ್ ಮಷೀನ್ ದೂರುದಾರರಿಗೆ ಬದಲಾಯಿಸಿ ಕೊಡಬೇಕು ತಪ್ಪಿದ್ದಲ್ಲಿ ಆ ವಾಷೀಂಗ್ ಮಷೀನಿನ ಪೂರ್ತಿ ಹಣ ರೂ.15,499 ರೂ. ಅದರ ಮೇಲೆ ಶೇ.8 ರಂತೆ ಬಡ್ಡಿ ವಾಷೀಂಗ್ ಮಶೀನ್ ಖರೀದಿಸಿದ ಆಗಸ್ಟ್ 10, 2020 ರಿಂದ ಲೆಕ್ಕ ಹಾಕಿ ಹಣ ಸಂದಾಯ ಮಾಡುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಎದುರುದಾರ ಕಂಪನಿಯವರು ರೂ.10,000 ರೂ.ಗಳ ಪರಿಹಾರ ಹಾಗೂ ರೂ.3,000 ರೂ. ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ನಿರ್ದೇಶಿಸಿದೆ.