ಬೆಂಗಳೂರು : ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ 62 ತಾಲೂಕುಗಳು ಮಾತ್ರ ಬರ ತಾಲೂಕುಗಳೆಂದು ಘೋಷಿಸಲು ಅರ್ಹವಾಗಿದ್ದು, ಆಗಸ್ಟ್ ನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬರದ ಛಾಯೆ ಇರುವ 134 ತಾಲೂಕುಗಳಲ್ಲಿ ಇನ್ನೊಂದು ವಾರದೊಳಗೆ ಮತ್ತೆ ಸಮೀಕ್ಷೆ ನಡೆಸಿ ಒಟ್ಟು ಬರ ಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ.
ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಬಳಿಕ ಮಾಹಿತಿ ನೀಡಿದ ಅವರು, ಆಗಸ್ಟ್ 19ರವರೆಗೆ ಬರ ಪರಿಸ್ಥಿತಿ ಕಂಡು ಬಂದಿದ್ದ 113 ತಾಲೂಕುಗಳಲ್ಲಿ ಕೇಂದ್ರದ ಮಾನದಂಡಗಳಾದ ಶೇ.60ಕ್ಕಿಂತ ಹೆಚ್ಚು ಮಳೆ ಕೊರತೆ, ಸತತ 3 ವಾರ ಶುಷ್ಕ ವಾತಾವರಣ ಇರುವುದು ಸೇರಿ ಇತರೆ ಅಂಶಗಳನ್ನು ಅನುಸರಿಸಿ ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಈ ಸಮೀಕ್ಷಾ ವರದಿಯಲ್ಲಿ 113 ತಾಲೂಕುಗಳ ಪೈಕಿ 62 ತಾಲೂಕುಗಳು ಮಾತ್ರ ಬರ ಎಂದು ಘೋಷಿಸಲು ಅರ್ಹತೆ ಪಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಶೇ.73ರಷ್ಟು ಮಳೆ ಕೊರತೆಯಾಗಿರುವುದರಿಂದ ಇನ್ನೂ 83 ಹೆಚ್ಚುವರಿ ತಾಲೂಕುಗಳಲ್ಲೂ ಬರದ ಛಾಯೆ ಕ೦ಡುಬ೦ದಿದೆ. ಹೀಗಾಗಿ ಈ 83 ತಾಲೂಕುಗಳ ಜೊತೆಗೆ ಮೊದಲ ಹಂತದ ಸಮೀಕ್ಷೆಯಲ್ಲಿ ಬರ ವ್ಯಾಪ್ತಿಗೆ ಅರ್ಹವಾಗದ 51 ತಾಲೂಕುಗಳನ್ನು ಸೇರಿಸಿ ಒಟ್ಟು 134ತಾಲೂಕುಗಳಲ್ಲಿ ಇನ್ನೊಂದು ವಾರದಲ್ಲಿ ಮತ್ತೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.