ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರವು 100 ದಿನ ಪೂರೈಸಿ, ನುಡಿದಂತೆ ನಡೆದಿದೆ. ಸಾರ್ವಜನಿಕರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಸರ್ಕಾರ ಯಶಸ್ಸಿನತ್ತ ಸಾಗಿದೆ. ಇದೇ ಮೇ,20 ರಂದು ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರ ಮನಃ ಗೆದ್ದಿದೆ.
ಶಕ್ತಿ ಯೋಜನೆ: ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯು ಜೂನ್, 11 ರಂದು ಪ್ರಥಮ ಯೋಜನೆಯಾಗಿ ಜಾರಿಗೊಂಡಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿರುವುದು ವಿಶೇಷವಾಗಿದೆ. ಕೊಡಗು ಜಿಲ್ಲೆಯಲ್ಲಿ ಆಗಸ್ಟ್, 27 ರವರೆಗೆ 11,10,983 ಮಂದಿ ಮಹಿಳೆಯರು ಬಸ್‍ನಲ್ಲಿ ಪ್ರಯಾಣ ಬೆಳೆಸಿದ್ದು, 4,10,54,728 ರೂ. ವೆಚ್ಚವನ್ನು ಸರ್ಕಾರ ಭರಿಸಿದೆ.
‘ಅನ್ನಭಾಗ್ಯ ಯೋಜನೆ’ : ಸರ್ಕಾರ ಬಿಪಿಎಲ್, ಎಎವೈ ಫಲಾನುಭವಿಗಳಿಗೆ ಈಗಾಗಲೆ ವಿತರಿಸುತ್ತಿರುವ 05 ಕೆ.ಜಿ ಅಕ್ಕಿಯೊಂದಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ವಿತರಣೆ ಮಾಡಲು ಉದ್ದೇಶಿಸಿತ್ತು, ಆದರೆ ಅಕ್ಕಿಯ ಕೊರತೆ ಇರುವ ಕಾರಣ ಹೆಚ್ಚುವರಿ 05 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ 34 ರೂ. ನಂತೆ ಪ್ರತೀ ಫಲಾನುಭವಿಗೆ ಮಾಹೆಗೆ 170 ರೂ ನಂತೆ ಡಿ.ಬಿ.ಟಿ ಮೂಲಕ ಫಲಾನುಭವಿಗಳಿಗೆ ಜುಲೈ ತಿಂಗಳಲ್ಲಿ 4.24 ಕೋಟಿ ರೂ. ನಗದನ್ನು ವರ್ಗಾವಣೆ ಮಾಡಲಾಗಿದೆ. ಆಗಸ್ಟ್ ತಿಂಗಳಲ್ಲಿನ ನಗದು ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಗೃಹಜ್ಯೋತಿ: ಪ್ರತೀ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ‘ಗೃಹಜ್ಯೋತಿ’ ಯೋಜನೆ ಇದೇ ಆಗಸ್ಟ್, 05 ರಂದು ಚಾಲನೆಗೊಂಡಿದೆ. ಸರ್ವರನ್ನು ಒಳಗೊಂಡ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಪರ ಅಭಿವೃದ್ಧಿ ನಮ್ಮ ಸರ್ಕಾರದ ಧ್ಯೇಯವಾಗಿದ್ದು, ನುಡಿದಂತೆ ನಡೆಯುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 1.30 ಲಕ್ಷ ಕ್ಕೂ ಹೆಚ್ಚು ಮಂದಿ ಗೃಹಜ್ಯೋತಿ ಯೋಜನೆಗೆ ಹೆಸರು ನೋಂದಾಯಿಸಿದ್ದು, ಈ ಯೋಜನೆಯಡಿ ರೂ 3 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಭರಿಸಿದೆ.
ಗೃಹಲಕ್ಷ್ಮಿ: ಪ್ರತಿ ಕುಟುಂಬದಲ್ಲಿನ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2 ಸಾವಿರ ರೂ. ನೀಡುವ ‘ಗೃಹ ಲಕ್ಷ್ಮಿ’ ಯೋಜನೆ ಇದೇ ಆಗಸ್ಟ್ 30 ರಿಂದ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ.
ಆ ದಿಸೆಯಲ್ಲಿ ಸರ್ಕಾರ 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದು, ನೋಂದಣಿ ಕಾರ್ಯ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ 1,31,863 ಗುರಿಯಲ್ಲಿ ಆಗಸ್ಟ್, 28 ರವರೆಗೆ 1,05122 ಮಂದಿ ಹೆಸರು ನೋಂದಾಯಿಸಿದ್ದು, ಶೇ.81.14 ರಷ್ಟು ಪ್ರಗತಿ ಸಾಧಿಸಲಾಗಿದೆ.
ಹಾಗೆಯೇ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಮುಂಗಡ ಪತ್ರದಲ್ಲಿ ಹಣವನ್ನು ಕಾಯ್ದಿರಿಸಿದೆ. 5 ಗ್ಯಾರಂಟಿಗಳ ಅನುಷ್ಠಾನ ಇಡೀ ರಾಷ್ಟ್ರದಲ್ಲಿಯೇ ಹೆಸರು ಗಳಿಸಿ, ರಾಜ್ಯದ ಎಲ್ಲಾ ಬಡ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಾಗೆಯೇ ಸರ್ಕಾರ ಬಜೆಟ್‍ನಲ್ಲಿ ಪರಿಶಿಷ್ಟ ಪಂಗಡದ ಸೋಲಿಗ, ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಕೊರಗ, ಇರುಳಿಗ ಮೊದಲಾದ ಆದಿವಾಸಿಗಳು ಮತ್ತು ಅಲೆಮಾರಿ ಜನಾಂಗದವರ ಅಭಿವೃದ್ಧಿಗೆ 50 ಕೋಟಿ ರೂ. ವನ್ನು ಸರ್ಕಾರ ಮುಂಗಡ ಪತ್ರದಲ್ಲಿ ಪ್ರಕಟಿಸಿದೆ.
‘ಬುಡಕಟ್ಟು ಆದಿವಾಸಿ ಪಂಗಡದವರಿಗೆ ನೀಡಲಾಗುತ್ತಿದ್ದ ಪೌಷ್ಠಿಕ ಆಹಾರ ಯೋಜನೆಯನ್ನು 6 ತಿಂಗಳಿನಿಂದ 12 ತಿಂಗಳವರೆಗೆ ವಿಸ್ತರಿಸಿರುವುದು ವಿಶೇಷವಾಗಿದೆ. ಇದರಿಂದ ಕೊಡಗಿನ ಆದಿವಾಸಿ ಜನರಿಗೆ ಬಹು ಉಪಯುಕ್ತವಾಗಲಿದೆ.’ ಅಮೃತ್ 2.0 ಯೋಜನೆಯಡಿ ನಗರ ನೀರು ಸರಬರಾಜು ಯೋಜನೆಗೆ ಹೆಚ್ಚಿನ ಹಣ ಕಾಯ್ದಿರಿಸಲಾಗಿದೆ.
ಹೀಗೆ ಐದು ಗ್ಯಾರಂಟಿ ಯೋಜನೆಗಳ ಜೊತೆಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆಯುತ್ತಿರುವುದು ವಿಶೇಷವಾಗಿದೆ.