ಧಾರವಾಡ : ರಾಜ್ಯ ಸರಕಾರದ ವಿನೂತನ ಶಕ್ತಿ ಯೋಜನೆ ಯಶಸ್ವಿಯಾಗಿ ಮುಂದುವರಿದಿದೆ. ಯೋಜನೆ ಪೂರ್ವದಲ್ಲಿ ಪ್ರತಿದಿನ ಸುಮಾರು 85 ಲಕ್ಷ ಜನ ಸರಕಾರಿ ಬಸ್ ಗಳಲ್ಲಿ ಸಂಚರಿಸುತ್ತಿದ್ದರು, ಶಕ್ತಿ ಯೋಜನೆ ಜಾರಿ ನಂತರ ಪ್ರತಿದಿನ ಅಂದಾಜು 1.10 ಕೋಟಿ ಜನರು ಸರಕಾರಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಇದು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳ ದೂರದೃಷ್ಟಿ ಫಲ, ಬದ್ಧತೆಗೆ ಸಾಕ್ಷಿ ಆಗಿದೆ ಎಂದು ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.
ಅವರು ಇಂದು ಸಂಜೆ ಸತ್ತೂರಿನ ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಸಂಭ್ರಮ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಪ್ರಶಸ್ತಿ, ಪದಕವಿತರಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಮಾತನಾಡಿದರು.
ಸಾರಿಗೆ ಇಲಾಖೆಯಲ್ಲಿ ವಿವಿಧ ಕಾರ್ಯಕ್ರಮ ಮತ್ತು ಕಾರ್ಯಚಟುವಟಿಕೆಗಳನ್ನು ಹಮ್ಮಿಕೋಳ್ಳಲು ಅನುವಾಗುವಂತೆ ಪ್ರಸ್ತುತ ಬಜೆಟ್ ದಲ್ಲಿ ಸಾರಿಗೆ ಇಲಾಖೆಗೆ ಮುಖ್ಯಮಂತ್ರಿಗಳು ಸುಮಾರು 1500 ಕೋಟಿ ರೂ.ಹಣ ಹಂಚಿಕೆ ಮಾಡಿ, ಈಗಾಗಲೇ ವಾಯವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 150 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ವಿಶೇಷವಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಸುಗಮ ಮತ್ತು ಸುರಕ್ಷಿತ ಸಾರಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. 325 ಹೊಸ ಬಸ್ ನೀಡಲಾಗಿದೆ ಎಂದರು.
ಮುಂದಿನ 30 ವರ್ಷಗಳಲ್ಲಿ ಡಿಜೈಲ್ ಬಸ್, ವಾಹನಗಳ ಓಡಾಟವಿರುವದಿಲ್ಲ. ಸಾರಿಗೆ ಇಲಾಖೆ ಈಗಾಗಲೇ ವಿದ್ಯುತ್ ಚಾಲಿತ ಬಸ್ ಗಳನ್ನು ಓಡಿಸಲು ಆರಂಭಿಸಿದ್ದು, ಕೇಂದ್ರ ಸರಕಾರದ ಸಬ್ಸಿಡಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯಿಂದ ಹೆಚ್ಚು ಬಸ್ ಗಳನ್ನು ಖರೀದಿಸಿ, ಸಾರ್ವಜನಿಕರ ಸಂಚಾರಕ್ಕೆ ಬಳಸಲಾಗುವುದು. ಇದಕ್ಕಾಗಿ ಎಲ್ಲ ಬಸ್ ನಿಲ್ದಾಣಗಳಲ್ಲಿ ವಿದ್ಯುತ್ತೀಕರಣ ಕಾರ್ಯವಾಗಬೇಕಿದೆ. ಈಗಾಗಲೇ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಬಸ್ ನಿಲ್ದಾಣಗಳನ್ನು ವಿದ್ಯುತ್ತೀಕರಣಗೊಳಿಸಿ, ವಿದ್ಯುತ ಚಾಲಿತ ಬಸ್ ಓಡಾಟಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಅಂದಾಜು 15 ಕೋಟಿ ರೂ. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.