ಬೆಂಗಳೂರು : ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಸುದ್ದಿ ಕುರಿತು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು,ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಸ್ಥಗಿತ ಎಂಬುದು ಸತ್ಯಕ್ಕೆ ದೂರವಾದ ಸುದ್ದಿ, ಶಕ್ತಿ ಯೋಜನೆ ಸ್ಥಗಿತವಾಗಲ್ಲ…ಮುಂದುವರೆಯುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಕ್ತಿ ಯೋಜನೆ ನಿಂತು ಹೋಗುತ್ತದೆ ಅಂತ ಊಹಾಪೋಹಗಳು ಕೇಳಿ ಬರುತ್ತಿವೆ. ಇದನ್ನು ಒಂದು ಪಕ್ಷದವರು ಮಾಡಿಸುತ್ತಿದ್ದಾರೆ ಎಂದರು. ಐದಲ್ಲ 10 ವರ್ಷ ಯೋಜನೆ ಮುಂದುವರೆಯುತ್ತದೆ. ಮಹಿಳೆಯರು ಯಾರೂ ಕೂಡ ಪಾಸ್ ಪಡೆಯುವ ಅಗತ್ಯವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಸದ್ಯದಲ್ಲೇ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗಲಿದೆ. ಈ ಬಗ್ಗೆ ಕೋರ್ಟ್ ಆದೇಶ ಹೊರಡಿಸಿದೆ ಎಂಬ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಹರಡಿಸುತ್ತಿದ್ದಾರೆ. ಈ ಹಿನ್ನೆಲೆ ಸ್ಪಷ್ಟನೆ ನೀಡಿದ ಕೆಎಸ್ ಆರ್ ಟಿಸಿ ಶಕ್ತಿ ಯೋಜನೆ ಸ್ಥಗಿತವಿಲ್ಲ…ಮುಂದುವರೆಯುತ್ತದೆ, ಯಾರೂ ಸುಳ್ಳು ಸುದ್ದಿ ನಂಬಬೇಡಿ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ಸ್ಪಷ್ಟನೆ ನೀಡಿದೆ.