ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೋಜನೆ ಆರಂಭವಾಗಿ ಒಂದು ತಿಂಗಳಿಗೆ ಬರೋಬ್ಬರಿ 17 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ.
ಶಕ್ತಿ ಯೋಜನೆಗೆ 1 ತಿಂಗಳು ತುಂಬಿದ್ದು, ಈ ಅವಧಿಯಲ್ಲಿ ಒಟ್ಟು 16.73 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದು, ಒಟ್ಟು ಟಿಕೆಟ್ ಮೌಲ್ಯ 402 ಕೋಟಿ ರೂ. ಗಳಷ್ಟಾಗಿದೆ.
ಶಕ್ತಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕಳೆದೊಂದು ತಿಂಗಳಲ್ಲಿ 32.89 ಕೋಟಿ ಜನರು ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಿದ್ದು, ಅದರಲ್ಲಿ 16.73 ಕೋಟಿ ಮಹಿಳಾ ಪ್ರಯಾಣಿಕರಿದ್ದಾರೆ.
ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ 5.09 ಕೋಟಿ ಮಹಿಳೆಯರು, ಬಿಎಂಟಿಸಿಯಲ್ಲಿ 5.38 ಕೋಟಿ ಮಹಿಳೆಯರು, ವಾಕರಸಾನಿಯಲ್ಲಿ 4.02 ಕೋಟಿ ಮಹಿಳೆಯರು, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ 2.23 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ.