alex Certify BIGG NEWS : `ಗ್ಯಾರಂಟಿ’ ಯೋಜನೆ’ಗಳಿಂದ ಪ್ರತಿ ಬಡ ಕುಟುಂಬಕ್ಕೆ 5,000 ರೂ. : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : `ಗ್ಯಾರಂಟಿ’ ಯೋಜನೆ’ಗಳಿಂದ ಪ್ರತಿ ಬಡ ಕುಟುಂಬಕ್ಕೆ 5,000 ರೂ. : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ರಾಜ್ಯ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ರೈತರು, ಬಡವರು, ಮಹಿಳೆಯರು, ಕಾರ್ಮಿಕರು, ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಯೊಂದು ಕುಟುಂಬಕ್ಕೆ ಐದು ಸಾವಿರ ರೂಪಾಯಿ ಲಭಿಸುತ್ತಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಇದರಿಂದ ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅಥಣಿ ತಾಲ್ಲೂಕಿನ ಕೊಕಟನೂರಿನಲ್ಲಿ ಶುಕ್ರವಾರ (ಆ.11) ನಡೆದ ಸಮಾರಂಭದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಲೋಕಾರ್ಪಣೆಗೊಳಿಸಿ ವಿವಿಧ ಅಭಿವೃದ್ಧಿ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಶಕ್ತಿ ಯೋಜನೆಯಡಿ ಇದುವರೆಗೆ 35 ಕೋಟಿ ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಸರಕಾರದ‌ ಆದಾಯ ಕೂಡ ಹೆಚ್ಚಾಗಲಿದೆ. ರಾಜ್ಯದ 1.30 ಕೋಟಿಗೂ ಅಧಿಕ ಕುಟುಂಬಗಳಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ದೇಶದಲ್ಲೇ ಅಪರೂಪದ ಯೋಜನೆಯಾಗಿದೆ.‌ ವರ್ಷಕ್ಕೆ 35 ಸಾವಿರ ಕೋಟಿ ರೂಪಾಯಿ ಇದಕ್ಕೆ ವಿನಿಯೋಗಿಸಲಾಗುವುದು ಎಂದರು.

ಗ್ಯಾರಂಟಿ ಅನುಷ್ಠಾನ ಸೇರಿದಂತೆ ಸರಕಾರದ‌ ಸಾಧನೆಯು ವಿರೋಧ ಪಕ್ಷವನ್ನು ಕಂಗೆಡಿಸಿದೆ.‌ ಏನೇ ಆದರೂ ಸರಕಾರ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚುನಾವಣಾ ಸಂದರ್ಭದಲ್ಲಿ ನೀಡಲಾದ ಪ್ರತಿಯೊಂದು ಭರವಸೆಗಳನ್ನು ಸರಕಾರ ಈಡೇರಿಸಲಿದೆ. ನುಡಿದಂತೆ ನಡೆಯುವ ಸರಕಾರ ನಮ್ಮದು ಎಂದರು.

ಕಳೆದ ಬಾರಿ 165 ಭರವಸೆಗಳ ಪೈಕಿ 158 ಈಡೇರಿಸಲಾಗಿದೆ. ಅದೇ ರೀತಿ ಈ ಸಲ ನೀಡಲಾಗಿರುವ ಐದು ಗ್ಯಾರಂಟಿ  ಇತ್ತೀಚಿನ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಲಾದ 76 ಭರವಸೆಗಳನ್ನು ಈಡೇರಿಸಲು ಪ್ರಸಕ್ತ ಸಾಲಿನ ಬಜೆಟ್ ನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ.  ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಈಗಾಗಲೇ ಈಡೇರಿಸಲಾಗಿದೆ. ಗೃಹಲಕ್ಷ್ಮೀ ಈ ಮಾಹೆಯಲ್ಲಿ ಜಾರಿಗೆ ತರಲಾಗುತ್ತಿದ್ದು, ಐದನೇ ಗ್ಯಾರಂಟಿ ಯುವ ನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೊಳಿಸಲಾಗುವುದು.

ಪ್ರಮುಖ ಸಮಾಜ ಸುಧಾರಕರ ಪೈಕಿ ಬಸವಣ್ಣ ನನಗೆ ಅತ್ಯಂತ ಇಷ್ಟವಾದ ವ್ಯಕ್ತಿ. ಆದ್ದರಿಂದ ಬಸವ ಜಯಂತಿಯ ದಿನ ಪ್ರಮಾಣವಚನ ಸ್ವೀಕರಿಸಿ ನುಡಿದಂತೆ ನಡೆದಿರುತ್ತೇವೆ. ಆದ್ದರಿಂದ ಜನರು ಮತ್ತೇ ಆಶೀರ್ವಾದ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಪಶು ಸಂಪತ್ತು ಅಧಿಕವಾಗಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆಯ ಜತೆಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ.ಅಥಣಿ ಮತಕ್ಷೇತ್ರಕ್ಕೆ ಶಾಸಕ ಲಕ್ಷ್ಮಣ ಸವದಿ ಅವರು ಕೊಡುಗೆ ಅಪಾರವಾಗಿದೆ. ಆಯಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸವದಿ ಅವರ ಸಾಧನೆ ಅಭಿನಂದನಾರ್ಹ. ನೀರಾವರಿ ಯೋಜನೆ ಅನುಷ್ಠಾನ ಸೇರಿದಂತೆ ಎಲ್ಲಾ ಬೇಡಿಕೆ ಹಂತ ಹಂತವಾಗಿ ಈಡೇರಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಅಥಣಿ ಶಾಸಕರ ನೀರಾವರಿ ಯೋಜನೆಗಳ ಕನಸು ದೊಡ್ಡದಾಗಿವೆ. ಇಡೀ ಕ್ಷೇತ್ರದ ಜನರ ಬದುಕು ಹಸನಾಗಿಸಲು ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಅವರು ‌ಬಯಸಿದ್ದಾರೆ.  ಈ ಭಾಗದ ಜನರು ಮಾತ್ರವಲ್ಲ; ಜಾನುವಾರುಗಳ ಅನುಕೂಲಕ್ಕಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಶಾಸಕ ಲಕ್ಷ್ಮಣ ಸವದಿ ಸ್ಥಾಪಿಸುವ ಮೂಲಕ ತಮ್ಮ ಕಳಕಳಿಯನ್ನು ಪ್ರದರ್ಶಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕಾರ ನುಡಿದಂತೆ ನಡೆಯುತ್ತಿದ್ದು, ಐದೂ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...