ನವದೆಹಲಿ: ಬ್ರಿಟಿಷರ ಕಾಲದ 3 ಕಾನೂನುಗಳನ್ನು ಬದಲಿಸಲು ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.
ಭಾರತೀಯ ನ್ಯಾಯ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023 ಮತ್ತು ಭಾರತೀಯ ಸಾಕ್ಷಿ ಮಸೂದೆ 2023 ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
ಮಸೂದೆಗಳನ್ನು ಮಂಡಿಸುವಾಗ ಗೃಹ ಸಚಿವ ಅಮಿತ್ ಶಾ ಅವರು, ಭಾರತೀಯ ದಂಡ ಸಂಹಿತೆ(ಐಪಿಸಿ- Indian Penal Code) 1860 ಬದಲಿಗೆ ಭಾರತೀಯ ನ್ಯಾಯ ಸಂಹಿತಾ 2023 ಮತ್ತು ಕ್ರಿಮಿನಲ್ ಪ್ರೊಸೀಜರ್ ಆಕ್ಟ್ 1898 ರ ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ 2023 ಬರಲಿದೆ ಎಂದು ಹೇಳಿದರು.
ಈ ಮಸೂದೆಗಳು ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಪರಿವರ್ತಿಸುತ್ತವೆ. ಶಾಸನಗಳು ಜನರಿಗೆ ದಂಡ ವಿಧಿಸುವ ಬದಲು ನ್ಯಾಯ ಒದಗಿಸುವ ಗುರಿಯನ್ನು ಹೊಂದಿವೆ. ಕೂಲಂಕಷವಾಗಿ ಚರ್ಚಿಸಿ ಈ ಮಸೂದೆಗಳನ್ನು ತರಲಾಗಿದೆ ಎಂದರು.
ಮಸೂದೆಗಳ ನಿಬಂಧನೆಗಳ ಕುರಿತು ಮಾತನಾಡಿದ ಅವರು, ದೇಶದ್ರೋಹಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು. ಅಪರಾಧ ನ್ಯಾಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕಾನೂನುಗಳಲ್ಲಿ 313 ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳಿಗೆ ತ್ವರಿತ ನ್ಯಾಯ ಒದಗಿಸಲು ವಿಶೇಷ ನಿಬಂಧನೆಗಳನ್ನು ಮಾಡಲಾಗಿದೆ. ಇಡೀ ಅಪರಾಧ ನ್ಯಾಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ವಿಶೇಷ ಗಮನಹರಿಸಲಾಗಿದೆ. ಮಸೂದೆಯನ್ನು ಹೆಚ್ಚಿನ ಚರ್ಚೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ವಿಧೇಯಕಗಳನ್ನು ಮಂಡಿಸಿದಾಗ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಅಮಾನತು ವಿಷಯವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ಸದಸ್ಯರು ಸದನದಿಂದ ಹೊರನಡೆದರು.