ಇಸ್ರೇಲ್ : ಹಮಾಸ್ ಉಗ್ರರು-ಇಸ್ರೇಲ್ ನಡುವೆ ಯುದ್ಧದ ತೀವ್ರತೆ ಮುಂದುವರೆದಿದ್ದು, ಈವರೆಗೆ ಯುದ್ಧದಲ್ಲಿ 1000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ವರದಿಯಾಗಿದೆ. ಈ ನಡುವೆ ಇಸ್ರೇಲ್ ನಲ್ಲಿರುವ ಕನ್ನಡತಿ ನ್ಯಾನ್ಸಿ ನೊರೊನ್ಹಾ ಅವರು ಇಸ್ರೇಲ್ ಯುದ್ಧದ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನ್ಯಾನ್ಸಿ ನೊರೊನ್ಹಾ, ನಾ ಕಂಡಂತೆ ಇಸ್ರಾಲ್ ದೇಶದಲ್ಲಿ ಯುದ್ಧದ ಭೀಕರತೆ…..
7 ಅಕ್ಟೋಬರ್ ನಡು-ರಾತ್ರಿ ಅಂದರೆ ಸಮಯ 9 ರಿಂದ 10 ಆಗಿರಬಹುದು ನಾನು ಹೊರಗಿದ್ದೆ. ಏಳನೆಯ ತಾರೀಖಿನಂದು ಮುಂಜಾನೆಯ ಸಮಯ ಆರು ಗಂಟೆಗೆ ಇಲ್ಲಿ ಗಝ ಮತ್ತು ಪ್ಯಲಸ್ತೀನಿ ಕಡೆಯವರು ಇಸ್ರೇಲ್ ಮೇಲೆ ಅವರು ಅಟ್ಯಾಕ್ ಮಾಡಿದ್ದರು. ಆ ಸಮಯದಲ್ಲಿ ಇಲ್ಲಿ ಮುನ್ನೆಚ್ಚರಿಕೆಯ ಗಂಟೆಯನ್ನು ಬಾರಿಸಿದ್ದರು. ಅದಾದ ನಂತರ ಹಗಲು ಹೊತ್ತಿನಲ್ಲಿ ಯಾವುದೇ ಸೈರನ್ ನಮಗೆ ಕೇಳಲಿಲ್ಲ. ಹಾಗೆಣಿಸಿ ಮಂಡ್ ಧೈರ್ಯ ಅಂತಾನೆ ಹೇಳಬಹುದು ನಾನು ಹೊರಗೆ ಹೋಗಿದ್ದೆ. ಏಕಾಏಕಿಯಾಗಿ ರಾತ್ರಿಯ ಹೊತ್ತು ಆಗಸದಲ್ಲಿ ಬೆಂಕಿ ಮತ್ತು ಶಬ್ದ ಕಾಣಿಸತೊಡಗಿತು (ಮಾಲೆ ಪಟಾಕಿ ಒಡೆಯುವಾಗ ಬರುವ ಸದ್ದು ಮತ್ತು ಬೆಂಕಿಯ )ಹಾಗೆ ಶುರುವಾಯಿತು. ನೋಡ ನೋಡುತ್ತಿದ್ದಂತೆ ಒಂದು ಬೆಂಕಿಯ ಚೆಂಡು ನನ್ನ ಹತ್ತಿರವೇ ಬಂತು ಮತ್ತು ನಾನಿರುವ ಎದುರಿನ ಕಟ್ಟಡಕ್ಕೆ ಅಪ್ಪಳಿಸಿತು. ಭಯಾನಕ ಶಬ್ದ ನಾನಿರುವ ಕಟ್ಟಡದ ಕಿಟಕಿಯ ಗಾಜುಗಳೆಲ್ಲ ಫಳಫಳನೆ ಪುಡಿಪುಡಿಯಾಗಿ ಬಿತ್ತು.
ನನ್ನ ಬಾಯೊಳಗೆ ಆ ಕಟ್ಟಡದ ಧೂಳೆಲ್ಲ ಹೋಯಿತು ಒಂದು ಕ್ಷಣಕ್ಕೆ ಯಮದೂತ ನನ್ನ ಕಣ್ಣಿದಿರಲ್ಲೇ ಬಂದು ಹೋದ. ಜೀವ ಭಯ ಎಂದರೇನು ಅಂತ ಕಣ್ಣು ಮುಚ್ಚಿ ಬಿಡುವುದರ ಒಳಗೆ ನನಗೆ ಅನುಭವವಾಯಿತು. ಪ್ರಾಣ ಕೈ ಬಂತಪ್ಪ ಅಂತ ಹೇಳ್ತಾರಲ್ಲ ಹಾಗೆ ಆಯಿತು ನನಗೆ. ಒಂದು ಕೂದಲೆಳೆಯ ಅಂತರದಲ್ಲಿ ನಾನು ಸಾವಿನಿಂದ ಪಾರಾದೆ . ಎಂತಹ ಭೀಕರತೆಯ ಸಾವುಗಳು ಇರುತ್ತೆ ಅನ್ನೋದು ಇದು ಒಂದು ಸಾಕ್ಷಿ. ಹಾಗೆ ಆ ಕಟ್ಟಡದಲ್ಲಿದ್ದ ಜನಗಳಿಗೆ 9 ಮಂದಿಗೆ ಗಂಭೀರ ಗಾಯಗಳಾಗಿದ್ದು ಮೂರು ಮಂದಿಯ ಸ್ಥಿತಿ, ಇನ್ನೂ ಗಂಭೀರವಾಗಿದೆ.
ಇಲ್ಲಿಯ ಇನ್ನೊಂದು ವಿಶೇಷತೆ ಏನೆಂದರೆ ಪ್ರತಿ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆಯ ತನಕ ಶಬ್ಬತ್ (Shabath)ಆಚರಣೆ ಮಾಡುತ್ತಾರೆ. ಶಬ್ಬತ್ ಅಂದರೆ ಮೌನದ ವಾತಾವರಣ ಇಸ್ರೇಲ್ ದೇಶದ ಪ್ರಜೆಗಳು ಅದರಲ್ಲೂ ಯಹೂದಿಗಳು. ಎಲೆಕ್ಟ್ರಿಸಿಟಿ , ಮೊಬೈಲ್, ಟಿವಿ, ಕಾರ್ ಡ್ರೈವಿಂಗ್, ಸಿ ಸಿ ಕ್ಯಾಮೆರಾ, ಇದ್ಯಾವುದೂ ಉಪಯೋಗ ಮಾಡುವುದಿಲ್ಲ ಮತ್ತು ಅಡುಗೆ ಕೂಡಾ ಮಾಡುವುದಿಲ್ಲ. ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆಯ ತನಕ ಮಾಡುವ ಊಟಕ್ಕೆ ಗುರುವಾರದಿಂದಲೇ ತಯಾರಿ ಮಾಡಿರುತ್ತಾರೆ. ಮತ್ತು ಅದನ್ನು ಫ್ಲಾಟ ಅಂದರೆ (ಎಲೆಕ್ಟ್ರಿಸಿಟಿ ಸ್ಟವ್) ಶಬ್ಬತ್ ಶುರುವಾಗುವ ಮೊದಲೇ ಕನೆಕ್ಟ್ ಮಾಡಿ ಇಟ್ಟಿರುತ್ತಾರೆ. ಇದರಲ್ಲೇ ಮಾಡಿಟ್ಟ ಆಹಾರವನ್ನು ಬಿಸಿ ಮಾಡಿ ತಿನ್ನುತ್ತಾರೆ. ಯಹೂದಿಗಳ (ತೋರಾ) ಅಂದರೆ ಬೈಬಲ್ ಏನು ಹೇಳುತ್ತಾರೆ ಅದನ್ನೇ ಬಹಳ ಶ್ರದ್ಧಾಪೂರ್ವಕವಾಗಿ ಆಚರಿಸುತ್ತಾರೆ.
ಅಂದಹಾಗೆ ಇಲ್ಲಿಯ ಯುದ್ಧದ ವಾತಾವರಣ ನಿನಗೇನು ಹೊಸತಾಗಿಲ್ಲ ನಾನಿಲ್ಲಿ ಎಂಟು ವರ್ಷದಿಂದ ಕೆಲಸದ ನಿಮಿತ್ತ ವಾಸವಾಗಿದ್ದೇನೆ. ಇಸ್ರೇಲ್ ನಲ್ಲಿ ಸರಿಸುಮಾರಾಗಿ 20,000 ಸಾವಿರ ಭಾರತೀಯರು ವಾಸವಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ, ಸರಿಯಾಗಿ ನನಗೆ ಲೆಕ್ಕವಿಲ್ಲ .
ಯಾವಾಗಲೂ ಯುದ್ಧದ ವಾತಾವರಣ ಇರುತ್ತದೆ ಇಲ್ಲಿಯ ಚಿಕ್ಕ ಮಕ್ಕಳು ಕೂಡ ಒಂದು ಸೈರನ್ ಬಂದರೆ ಸಾಕು “ಬೊಂಬ್ ಶೆಲ್ಟರ್” ಒಳಗೆ ಓಡಲು ರೆಡಿಯಾಗಿರುತ್ತಾರೆ. ಅಷ್ಟರಮಟ್ಟಿಗೆ ಇಲ್ಲಿಯವರಿಗೆ ತರಬೇತಿ ಕೊಟ್ಟಿರುತ್ತಾರೆ ಮತ್ತು ಅವರು ತಯಾರಿ ಆಗಿರುತ್ತಾರೆ. ಆದರೆ ಈ ಬಾರಿ ನಡೆದ ಘಟನೆ ಗಂಭೀರವಾಗಿದೆ. ಯಾಕೆಂದರೆ ಇಸ್ರಾಯೆಲ್ ನಲ್ಲಿ ಒಂದು ತಿಂಗಳಿನಿಂದ ಹಬ್ಬದ ವಾತಾವರಣ ಸರಕಾರಿ ಕಚೇರಿಗಳಿಗೆ ರಜೆಯೋ ರಜ. ಮೊದಲು ಬಂದ ಹಬ್ಬ ಹೊಸ ವರ್ಷ ಹೀಬ್ರೂ ಭಾಷೆಯಲ್ಲಿ (ರೋಷಾಶನ)ಅಂತ ಹೇಳ್ತಾರೆ. ಅದಾದ ನಂತರ ಬಂದ ಹಬ್ಬ “ಯೋಮ್ ಕಿಪುರ್” ಅಂದರೆ ಉಪವಾಸ ನಿಲ್ಲುವ ಹಬ್ಬ . ಅದಾದ ನಂತರ “ಸುಕೋತ್” ಅಂತ ಹೇಳಿ ಅಂದರೆ ಎಂಟು ದಿನಗಳ ಉಪವಾಸ ಬಿಟ್ಟು ಆಚರಿಸುವ ಹಬ್ಬ ಇದಾಗಿದೆ. ನೆನ್ನೆಯ ದಿನ ಅಂದರೆ ಶುಕ್ರವಾರ ಶನಿವಾರ ಇಲ್ಲಿ ಸುಕೋತ್ ಆಚರಣೆಯಲ್ಲಿ ಮಗ್ನರಾಗಿರುತ್ತಾರೆ. ಈ ಹಬ್ಬದ ವಿಶೇಷತೆ ಏನೆಂದರೆ ಪ್ರತಿಯೊಬ್ಬ ಯಹೂದಿಗಳು ಮನೆಯಿಂದ ಹೊರಗೆ ಚಪ್ಪರದ ಹಾಗೆ (ಟೆಂಟ್ )ಕಟ್ಟಿ ಅದರೊಳಗೆ ಊಟ ಮಾಡುವುದು ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಆಚರಿಸುವ ಹಬ್ಬ ಇದಾಗಿದೆ
ಈ ಬಾರಿ ಇಲ್ಲಿ ನಡೆದ ಯುದ್ಧಕ್ಕೆ ಒಂದು ಲೆಕ್ಕದಲ್ಲಿ ಈ ಹಬ್ಬಗಳ ಆಚರಣೆಯೇ ಕಾರಣವಾಗಿರಬಹುದು ಎನ್ನುವ ಲೆಕ್ಕಾಚಾರ ನನ್ನದು. ಯಾಕೆಂದರೆ ಗಡಿಯಲ್ಲಿದ್ದ ಸೈನಿಕರು ಅದರಲ್ಲೂ ಯಹೂದಿಗಳು ಪ್ರತಿಯೊಬ್ಬರು ಹಬ್ಬ ಆಚರಣೆಗಾಗಿ ಅವರವರ ಮನೆಗೆ ಮರಳಿರುತ್ತಾರೆ. ಶೇಕಡ ಒಂದು 20ರಷ್ಟು ಮಾತ್ರ ಗಡಿಯಲ್ಲಿ ಇದ್ದು ಕೆಲಸ ಮಾಡುತ್ತಾರೆ . ಇದೇ ಸರಿಯಾದ ಸಮಯವನ್ನು ಉಗ್ರರು ಉಪಯೋಗಿಸಿಕೊಂಡಿದ್ದಾರೆ. ಇವರ ವೀಕ್ ಪಾಯಿಂಟ್ ಆಗಿತ್ತು ಹಬ್ಬದ ಆಚರಣೆ ಅದರಲ್ಲೂ ಶಬ್ಬಾತ್ ಮತ್ತು ಹಬ್ಬ ಎರಡು ಒಟ್ಟೊಟ್ಟಿಗೆ ಬಂದ ಕಾರಣ. ಹಬ್ಬದೊಟ್ಟಿಗೆ ಯಾವುದೇ ತರಹದ ಎಲೆಕ್ಟ್ರಿಸಿಟಿ ಉಪಕರಣಗಳು ಉಪಯೋಗಿಸದೆ ಇರುವುದರಿಂದ ಗಡಿಯಲ್ಲಿ ಏನಾಗುತ್ತದೆ ಎಂಬ ಮಾಹಿತಿ ಸರಿಯಾಗಿ ಇವರಿಗೆ ಸಿಗದೇ ಇಲ್ಲದ ಕಾರಣ. ಇಷ್ಟೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದೆ.
ಇನ್ನು ಯುದ್ಧದ ವಾತಾವರಣ ನಿಂತಿಲ್ಲ
ಇಲ್ಲಿಯ ತನಕ ಅಂದರೆ ಅಕ್ಟೋಬರ್ /8 ಸಂಜೆ 4:00 ಸಮಯ 600 ಜನ ಸತ್ತಿದ್ದಾರೆ 20148 ಜನ ಗಾಯಗಳಾಗಿವೆ 350 ಜನ ಗಂಭೀರ ಸ್ಥಿತಿಯಲ್ಲಿದ್ದಾರೆ. ಇದಕ್ಕೆಲ್ಲ ಕೊನೆ ಯಾವಾಗ ಏನೇ ಆಗಲಿ ಎಲ್ಲಾ ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಮನವಿ ಮಾಡಿದ್ದಾರೆ.