ಚಿತ್ರದುರ್ಗ : ಅಂಚೆ ಇಲಾಖೆಯಲ್ಲಿ ಅನುಕಂಪ ಆಧಾರಿತ ನೌಕರಿಯ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಸಿಹಿಸುದ್ದಿ ನೀಡಿದ್ದು, ಅನುಕಂಪದ ನೌಕರಿಗೆ ಅಡ್ಡಿಯಾಗಿರುವ ಶೇ.5 ಮೀಸಲು ನಿಯಮವನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಉಪ ಅಂಚೆ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ಸೇವೆಯಲ್ಲಿರುವ ನೌಕರರು ಮೃತಪಟ್ಟರೆ, ಅವರ ಕುಟುಂಬದ ಸದಸ್ಯರಿಗೆ ಕಡ್ಡಾಯವಾಗಿ ಉದ್ಯೋಗ ಕಲ್ಪಿಸಲಾಗುತ್ತದೆ. ಆದರೆ ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದ ಸಂದರ್ಭ ಶೇ. 5 ಮೀಸಲು ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದರು.
ಶೇ.5 ಮೀಸಲು ಆಧಾರದ ನಿಯಮ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ಮೃತರಾದ ಬಹಳಷ್ಟು ನೌಕರರ ಕುಟುಂಬದವರು ಅನುಕಂಪ ಆಧಾರಿತ ನೌಕರಿ ಪಡೆಯಲು ಅಡ್ಡಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದಲ್ಲಿ ಚರ್ಚಿಸಿ, ಈಗಿನ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.