ಕಲಬುರಗಿ : ಡಿಪ್ಲೋಮಾ, ಪದವೀಧರರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಈ ವರ್ಷದ ಅಂತ್ಯಕ್ಕೆ ಯುವನಿಧಿ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ತ ಕಲಬುರಗಿ ಪೊಲೀಸ್ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹಜ್ಯೋತಿಯೋಜನೆ ಅಡಿ 200 ಯುನಿಟ್ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. 2.14 ಕೋಟಿ ವಿದ್ಯುತ್ ಗ್ರಾಹಕರಿಗೆ ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಗೃಹಲಕ್ಷ್ಮೀ ಯೋಜನೆ ಅಡಿ ರಾಜ್ಯದ 1.28 ಕೋಟಿ ಮಹಿಳೆಯರಿಗೆ 30 ಸಾವಿರ ಕೋಟಿ ರೂ ನೀಡುತ್ತಿದೆ. ಯುವ ನಿಧಿ ಯೋಜನೆಗೆ ಈ ವರ್ಷದ ಅಂತ್ಯದೊಳಗೆ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯಂತೆಯೇ ಐದು ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆ ಅಡಿ ಪ್ರತಿ ದಿನ 50 ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕ 4,000 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆ 4.42 ಕೋಟಿ ಜನರಿಗೆ ಅಡಿ 5 ಕೆಜಿ ಅಕ್ಕಿ ಹಾಗೂ ಇನ್ನು ಐದು ಕೆಜಿ ಅಕ್ಕಿಯ ಹಣ ನೀಡಲಾಗುತ್ತಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.