
ಬೆಂಗಳೂರು : 2023-24 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವಿಸ್ತ್ರತವಾದ ಹಾಗೂ ಪರಿಣಾಮಕಾರಿ ಸಮೀಕ್ಷೆಯನ್ನು ನಡೆಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಆರ್.ಟಿ.ಇ. ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಯಾವ ಮಗುವೂ ಶಿಕ್ಷಣದಿಂದ ವಂಚಿರಾಗದಂತೆ ಎಲ್ಲಾ ನಾಗರೀಕರು, ಜನಪ್ರತಿನಿಧಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ವ್ಯಾಪ್ತಿಗೆ ಕರೆತರುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ.
ಪ್ರಾಥಮಿಕ ಶಿಕ್ಷಣ ಸಾರ್ವತ್ರೀಕರಣದ ಹಿನ್ನೆಲೆಯಲ್ಲಿ ಯಾವುದೇ ಅರ್ಹ ವಯಸ್ಸಿನ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲಾ ಮಕ್ಕಳನ್ನು ಶಿಕ್ಷಣ ವ್ಯಾಪ್ತಿಯಲ್ಲಿರುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಲವಾರು ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ “ಸಮಗ್ರ ಶಿಕ್ಷಣ ಕರ್ನಾಟಕ’ದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ರೀತಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರುವ ಸಲುವಾಗಿ ಮಕ್ಕಳನ್ನು ಗುರುತಿಸಲು ವಿಶೇಷ ಗಣತಿಯನ್ನು ಮಾಡಬೇಕಾಗಿದೆ. ಯಾವುದೇ ಮಗು ಈ ಗಣತಿಯ ವ್ಯಾಪ್ತಿಯಿಂದ ಹೊರಗುಳಿಯದಂತೆ ಗಣತಿ ಕಾರ್ಯವನ್ನು ನಿರ್ವಹಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ವಿಸ್ತ್ರತ ಮತ್ತು ಪರಿಣಾಮಕಾರಿಯಾದ ಸಮೀಕ್ಷೆಯನ್ನು ದಿನಾಂಕ:26.10.2023 ರಿಂದ ದಿನಾಂಕ:04.11.2023 ರವರೆಗೆ ನಡೆಸಲು ತೀರ್ಮಾನಿಸಿದೆ. ಜಿಲ್ಲೆ, ತಾಲ್ಲೂಕು, ಕ್ಲಸ್ಟರ್, ಶಾಲೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಈ ಕೆಳಗಿನಂತೆ ಕ್ರಮಗಳನ್ನು ಅನುಸರಿಸುವುದು.




