ಮಂಗಳೂರು : ಮುಂದಿನ ವರ್ಷದಿಂದ ಎಸ್ಎಸ್ ಎಲ್ ಸಿ ಪರೀಕ್ಷೆಗೂ 3 ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬೋರ್ಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರಿಂದ ಫೇಲಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಕಟ್ಟಿ, ಪಾಸಾಗಿ ಶಿಕ್ಷಣ ಮುಂದುವರೆಸಲು ಅನುಕೂಲವಾಗಲಿದೆ. ಇನ್ನು ಸಪ್ಲಿಮೆಂಟರಿ ಪರೀಕ್ಷೆ ಇರುವುದಿಲ್ಲ. ಮೂರು ಪರೀಕ್ಷೆಗಳನ್ನೂ ಬೋರ್ಡ್ ಪರೀಕ್ಷೆಗಳೆಂದೇ ಪರಿಗಣಿಸಲಾಗುವುದು. ಮುಂದಿನ ವರ್ಷ 10 ನೇ ತರಗತಿಗೂ ಬೋರ್ಡ್ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮುಂದಿನ ವರ್ಷ 500-600 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಾಗುವುದು, ಈ ಶಾಲೆಗಳಲ್ಲಿ 1,500 ಮಕ್ಕಳು ಕಲಿಯಲಿದ್ದಾರೆ. ಇಂಗ್ಲೀಷ್ ಮತ್ತು ಕನ್ನಡ ಮಾಧ್ಯವನ್ನು ಕಲಿಸಿ ಮಕ್ಕಳ ಶಿಕ್ಷಣ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಮುಂದಿನ ವರ್ಷದಿಂದ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದರು.