ಧಾರವಾಡ : ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಸೆ.5 ರಂದು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿಂದು ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು. ದೇಶದ ಉತ್ತಮ ಪ್ರಜೆಯಾಗಲು ಸಂವಿಧಾನವೇ ಮುಖ್ಯವಾಗಿದೆ. ಬದುಕಲು ಜೀವನ ಪದ್ದತಿ ಅರಿಯಲು ಎಲ್ಲರಿಗೂ ಸಂವಿಧಾನ ಬೇಕು. ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಸಂವಿಧಾನದ ಮಹತ್ವ ಅರಿಯಲು ಎಲ್ಲ ಶಾಲೆಗಳಲ್ಲಿ ಸೆ.5 ರಂದು ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದೆಂದರು. ಸಂವಿಧಾನ ಪಿಠಿಕೆಯ ದೊಡ್ಡ ಪ್ರತಿಯನ್ನು ಕಡ್ಡಾಯವಾಗಿ ಪ್ರತಿ ಶಾಲೆಗಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಅಳವಡಿಸಲಾಗುವುದೆಂದರು.
ಧಾರವಾಡ ಜಿಲ್ಲೆಯು ಇಡೀ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ. ಶೈಕ್ಷಣಿಕ ಹಬ್ ಎಂದೆನಿಸಿದೆ. ಸದ್ಯ ಇರುವ ಸಂಪನ್ಮೂಲಗಳನ್ನು ಬಳಸಿ ಪ್ರಾಥಮಿಕ, ಹೈಸ್ಕೊಲ್ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಧಿಕಾರಿಗಳು ಶ್ರಮಿಸಬೇಕು. ಬಿಇಓ ಹಾಗೂ ಡಿಡಿಪಿಐ ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಿ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 2022ರಲ್ಲಿ 1.47 ಲಕ್ಷ ಮಕ್ಕಳು ಸರಕಾರಿ ಶಾಲೆಗೆ ದಾಖಲಾಗಿದ್ದರು. 2023ನೇ ಸಾಲಿನಲ್ಲಿ 1.36 ಲಕ್ಷ ಮಕ್ಕಳು ದಾಖಲಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಮಕ್ಕಳ ದಾಖಲಾತಿ ಕಡಿಮೆಯಾಗಿದ್ದು, ಬಿಇಓಗಳು, ಶಿಕ್ಷಕರು ದಾಖಲಾತಿ ಸಂಖ್ಯೆ ಹೆಚ್ಚಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಚಿವರು ತಿಳಿಸಿದರು.
ಶಿಕ್ಷಕರು ಹೆಚ್ಚಿನ ಜವಾಬ್ದಾರಿ ಹೊತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕು. ಕೆಲವೆಡೆ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಇದ್ದರು ಸಹ ಲಭ್ಯವಿರುವ ಸಂಪನ್ಮೂಲಗಳಲ್ಲೇ ಉತ್ತಮ ಬದಲಾವಣೆ ತರಲು ಅಧಿಕಾರಿಗಳು ಹಾಗೂ ಶಿಕ್ಷಕರು ಶ್ರಮಿಸಬೇಕೆಂದು ಸಚಿವರು ಕರೆ ನೀಡಿದರು.
ಅತೀ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳು ಹಾಗೂ ಶಿಕ್ಷಕರಿಲ್ಲದ ಶಾಲೆಗಳನ್ನು ಹತ್ತಿರದ ಉತ್ತಮ ಶಾಲೆಗಳಿಗೆ ಸೇರ್ಪಡಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆಯೆಂದು ಸಚಿವರು ತಿಳಿಸಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಾಸಕರ ಬಳಿ ಅಭಿಪ್ರಾಯ ಪಡೆದು ಯೋಜನೆ ಹಮ್ಮಿಕೊಳ್ಳಲಾಗುವುದೆಂದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಅಧಿಕಾರಿಗಳು ಶ್ರಮಿಸಬೇಕೆಂದರು. ಡೈಯಟ್ ಸಂಸ್ಥೆಗಳು ಕ್ರೀಯಾಶೀಲರಾಗಿ, ಚುರುಕಾಗಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಬೇಕೆಂದು ಸಚಿವರು ಕರೆ ನೀಡಿದರು.