ಬೆಂಗಳೂರು : ಕರ್ನಾಟಕ ರಾಜ್ಯ ಜಾತಿ ಗಣತಿ ವರದಿ ಸಲ್ಲಿಕೆಗೆ ಆಯೋಗ ಸಿದ್ಧತೆ ನಡೆಸಿದ್ದು, ನವೆಂಬರ್ ನಲ್ಲಿ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಯಪ್ರಕಾಶ್ ಹೆಗಡೆ, ನವೆಂಬರ್ ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆಗೆ ಸಿದ್ಧತೆ ನಡೆಸಲಾಗಿದ್ದು, ಯಾವುದೇ ರೀತಿಯ ಪರಿಷ್ಕರಣೆ ಮಾಡದೇ ವರದಿ ಸಲ್ಲಿಸುತ್ತೇವೆ. ಸರ್ಕಾರ ಜಾತಿ ಗಣತಿ ವರದಿ ಸ್ವೀಕಾರ ಮಾಡಬಹುದು, ಅಥವಾ ಮಾಡದೇ ಇರಬಹುದು ಎಂದಿದ್ದಾರೆ.
ರಾಜ್ಯ ಸರ್ಕಾರವು ನಮಗೆ ಜಾತಿ ಗಣತಿ ವರದಿ ಸಲ್ಲಿಸಿ ಎಂದು ಹೇಳಿದೆ. ಹಿಂದೆ ಸಂಗ್ರಹಿಸಿದ್ದ ದತ್ತಾಂಶ ವರದಿಯನ್ನು ಸಲ್ಲಿಸುತ್ತೇವೆ. ಯಾವುದೇ ರೀತಿಯಲ್ಲೂ ಪರಿಷ್ಕರಿಸದೇ ಯಾವ ರೀತಿ ಇದೆಯೋ ಅದನ್ನೇ ಸಲ್ಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ..
ಜಾತಿ ಗಣತಿ ವರದಿ ಬಿಡುಗಡೆಗೆ ಸ್ಪಷ್ಟ ದಿನಾಂಕ ನಿಗದಿಪಡಿಸಿ ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಮಂಡಿಸುವಂತೆ ಒತ್ತಾಯಿಸುತ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಒತ್ತಾಯಿಸಿದ್ದಾರೆ.