ಬೆಂಗಳೂರು : ರಾಜ್ಯದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಆಯೋಗ ರಚಿಸುವ ಸಂಬಂಧ ಕಾನೂನು ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಸಮಿತಿ ರಾಜ್ಯ ಮುಖಂಡರೊಂದಿಗೆ ಸಭೆ ನಡೆಸಿ ಮಾತನಡಿದ ಸಿಎಂ ಸಿದ್ದರಾಮಯ್ಯ, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಆಯೋಗ ರಚಿಸುವ ಸಂಬಂಧ ಕಾನೂನು ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.
ಅಲೆಮಾರಿ, ಅರೆಅಲೆಮಾರಿ ಜನಾಂಗಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು. ಇವರಿಗೆ ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸುವ ಬಗ್ಗೆಯೂ ಪರಿಶೀಲಿಸಲಾಗುವುದು.ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಇದು ನಮ್ಮ ಸರ್ಕಾರದ ಆದ್ಯತೆ ಎಂದು ಹೇಳಿದ್ದಾರೆ.