ಬೆಂಗಳೂರು : ಗಣೇಶ ಹಬ್ಬವಾದ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ದೆಹಲಿಯಲ್ಲಿ ನಡೆಯಲಿದೆ. ಈ ಸಭೆ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
ಕರ್ನಾಟಕದಲ್ಲಿ ನೀರಿನ ತೀವ್ರ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ಸೆಪ್ಟೆಂಬರ್ 15 ರಂದು ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯುಸೆಕ್ ನೀರು ಬಿಡಲು ಸೂಚಿಸಲಾಗಿತ್ತು. ಹೀಗಾಗಿ ಸಮಿತಿಯ ಈ ಆದೇಶವನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ.
ಸದ್ಯ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಕಾವೇರಿ ಕಣಿವೆಯ ಪ್ರದೇಶದಲ್ಲಿ ಬರ ತಲೆದೂರಿದ್ದು, ಕುಡಿಯುವ ನೀರಿಗೂ ಕೊರತೆ ಸಾಧ್ಯತೆ ಸೇರಿದಂತೆ ಪ್ರಸ್ತುತ ಸ್ಥಿತಿಗತಿ, ನೀರಿನ ಪ್ರಮಾಣ ಎಲ್ಲವನ್ನೂ ಮುಂದಿಟ್ಟು ಕಾವೇರಿ ನೀರು ಬಿಡದಿರಲು ಕರ್ನಾಟಕ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.