
ಬೆಂಗಳೂರು : ಕಾರ್ ಪೂಲಿಂಗ್ ನಿಷೇಧ (Carpooling Ban) ಮಾಡಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಕಾರ್ ಪೂಲಿಂಗ್ ನಿಷೇಧಿಸಿಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ ಪೂಲಿಂಗ್ ನಿಷೇಧದ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಎಂದು ಹೇಳಿದ್ದಾರೆ.
ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ತಿಳಿಸಿದ್ದಾರೆ.